ಪ್ರಧಾನಿ ಮೋದಿ ಔತಣಕೂಟಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಗೈರು
ಪ್ರಧಾನಿ ನರೇಂದ್ರ ಮೋದಿ (Narendra Modi) ನಿನ್ನೆ ಬೆಂಗಳೂರಿನಲ್ಲಿ ಹಲವು ಕ್ಷೇತ್ರಗಳ ಗಣ್ಯರಿಗೆ ಔತಣಕೂಡ ಏರ್ಪಡಿಸಿದ್ದರು. ಸಿನಿಮಾ, ಕ್ರಿಕೆಟ್ ಮತ್ತು ನಾನಾ ಯುವಉದ್ಯಮಿಗಳನ್ನು ಆಹ್ವಾನಿಸಲಾಗಿತ್ತು. ಸಿನಿಮಾ ಕ್ಷೇತ್ರದಿಂದ ನಿರ್ಮಾಪಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್, ಹೊಂಬಾಳೆಯ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್ (Prashant Neel), ನಟರಾದ ಯಶ್ ಮತ್ತು ರಿಷಬ್ ಶೆಟ್ಟಿ ಹಾಗೂ ಮಾಜಿ ರೇಡಿಯೋ ಜಾಕಿ ಶ್ರದ್ಧಾ ಜೈನ್ ಇವರಿಗೆಲ್ಲ ಆಹ್ವಾನ ಹೋಗಿತ್ತು. ಪ್ರಶಾಂತ್ ನೀಲ್ ಹೊರತುಪಡಿಸಿ ಉಳಿದವರೆಲ್ಲರೂ ಪ್ರಧಾನಿ ಭೇಟಿ ಮಾಡಿ, ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.
ಆಹ್ವಾನಿಸಿದ ಪ್ರತಿಯೊಬ್ಬರೂ ಪ್ರಧಾನಿಯನ್ನು ಭೇಟಿ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿವೆ. ಆದರೆ, ಪ್ರಶಾಂತ್ ನೀಲ್ ಫೋಟೋ ಮಾತ್ರ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಕಾರಣ, ಅವರು ಭಾಗಿಯಾಗಿಲ್ಲವಂತೆ. ಖುದ್ದು ಪ್ರಧಾನಿ ಕಚೇರಿಯೇ ಪ್ರಶಾಂತ್ ಅವರಿಗೆ ಆಹ್ವಾನ ನೀಡಿದರೆ, ಪ್ರಶಾಂತ್ ಗೈರಿಗೆ ಕಾರಣವೇನು ಎನ್ನುವ ಚರ್ಚೆ ಕೂಡ ನಡೆದಿದೆ. ರಾಜಕಾರಣದಿಂದ ದೂರ ಇರುವುದಕ್ಕಾಗಿ ಪ್ರಶಾಂತ್ ಹೀಗೆ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಅಸಲಿ ಕಾರಣವೇ ಬೇರೆ ಇದೆ. ಪ್ರಶಾಂತ್ ನೀಲ್ ಆಪ್ತರ ಪ್ರಕಾರ, ಅವರು ಹೈದರಾಬಾದ್ ನಲ್ಲಿದ್ದಾರೆ. ಅಲ್ಲದೇ, ಪ್ರಶಾಂತ್ ಜ್ವರದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆರೋಗ್ಯ ಸರಿ ಇಲ್ಲದ ಕಾರಣದಿಂದಾಗಿ ಅವರು ಗೈರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಜ್ವರದ ಕಾರಣದಿಂದಾಗಿ ಅವರಿಗೆ ಬರಲು ಸಾಧ್ಯವಾಗಿಲ್ಲ, ಬೇರೆ ಯಾವ ಕಾರಣವೂ ಇಲ್ಲ ಎನ್ನುತ್ತಾರೆ ಪ್ರಶಾಂತ್ ಆಪ್ತರು. ಅಂತೂ ಪ್ರಧಾನಿ ಅವರು ಕನ್ನಡ ಸಿನಿಮಾ ರಂಗದ ಗಣ್ಯರನ್ನೂ ಕರೆಯಿಸಿಕೊಂಡು ಮಾತನಾಡಿರುವುದು ಚಿತ್ರರಂಗದ ಬೃಹತ್ ಬೆಳವಣಿಗೆಯನ್ನು ತೋರಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.