ಪೊಲೀಸರ ಕೈ ಬಲಪಡಿಸುವ ಬದ್ಧತೆ ಸರ್ಕಾರಕ್ಕಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

Aug 14, 2021

ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ನಾವು ಈ ಹಾದಿಯ ಸಿಂಹಾವಲೋಕನ ಮಾಡಬೇಕಿದೆ. ಬ್ರಿಷರು ನಾವು ಹೋದಮೇಲೆ ಈ ದೇಶ ನಾಶವಾಗಲಿದೆ ಎಂದಿದ್ದರು. ಆದರೆ ಈ ದೇಶವನ್ನು ಜಗತ್ತು ನೋಡುವ ಹಾಗೆ ಕಟ್ಟಿದ್ದೇವೆ. 75 ವರ್ಷದ ಹಿಂದೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆದಿತ್ತು. ಪಂಜಾಬ್‌ನ ಅಮೃತ್‌ಸರದಲ್ಲಿ ರಕ್ತದ ಕಲೆ ಇನ್ನೂ ಇದೆ. ಅವರ ಬಲಿದಾನ ವ್ಯರ್ಥ ಆಗಲು ಬಿಡಬಾರದು. ನಮ್ಮ ದೇಶವನ್ನು ಸದೃಢವಾಗಿ ಕಟ್ಟಬೇಕಿದೆ. ಪೊಲೀಸರು ದೈಹಿಕವಾಗಿ ಸದೃಢರಾಗಿರಬೇಕು. ಇದೇ ಇವತ್ತಿನ ಹೋರಾಟದ ಹಿಂದಿನ ತತ್ವ ಮತ್ತು ಸಿದ್ಧಾಂತ. ಈ ನಿಟ್ಟಿನಲ್ಲಿ ಮಾಧಕ ವಸ್ತು ನಿಯಂತ್ರಣಕ್ಕೆ ಪೊಲೀಸರು ದಿಟ್ಟ ಹೆಜ್ಜೆ ಇಡಬೇಕು. ಪೊಲೀಸರ ಕೈ ಬಲಪಡಿಸುವ ಬದ್ಧತೆ ಸರ್ಕಾರಕ್ಕಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬಳಿಕ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿದ್ದು, ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ ಮುಗಿದಿದೆ. ಪೊಲೀಸರು 24 ಗಂಟೆ ಒಳಗೆ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ವೀಕೆಂಡ್ ಲಾಕ್​ಡೌನ್​ ಜಾರಿ
ಬೆಂಗಳೂರಿನಲ್ಲಿ ವೀಕೆಂಡ್ ಲಾಕ್​ಡೌನ್​ ಜಾರಿ ವಿಚಾರವಾಗಿ ಆರೋಗ್ಯ ಸಚಿವರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಬಳಿಕ ಅಕ್ರಮವಾಗಿ ಭಾರತದಲ್ಲಿ ವಿದೇಶಿಗರು ನೆಲೆಸಿರುವ ವಿಚಾರವಾಗಿ ಮಾತನಾಡಿದ ಅವರು ವೀಸಾ ಅವಧಿ ಮುಗಿದ ಬಳಿಕವೂ ವಿದೇಶಿಗರು ಇದ್ದಾರೆ. ಅವರನ್ನು ವಾಪಸ್ ಕಳಿಸಲು ಕೆಲ ಕಾನೂನು ತೊಡಕಿದೆ.
ಸಂಬಂಧ ಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

Source: tv9 kannada