ನೀಲಿ ಜಾವ ಬಾಳೆಹಣ್ಣು ಗೊತ್ತಾ ? ಥೇಟ್ ವೆನಿಲ್ಲಾ ಐಸ್‌ಕ್ರೀಂನದ್ದೇ ಟೇಸ್ಟ್

Apr 17, 2021

ಬಾಲ್ಯದಿಂದಲೂ ಬಾಳೆಹಣ್ಣುಗಳನ್ನು ತಿನ್ನುತ್ತಲೇ ಇದ್ದೇವೆ. ವರ್ಷಪೂರ್ತಿ ಲಭ್ಯವಿರುವ ರುಚಿಯಾದ, ಆರೋಗ್ಯಕರ ಹಣ್ಣು ಅಂದರೆ ಬಾಳೆಹಣ್ಣು. ನಮ್ಮ ಹಣ್ಣಿನ ಲಿಸ್ಟ್‌ನಲ್ಲಿ ಬಾಳೆಹಣ್ಣಿಗೆ ಸ್ಥಿರವಾದ ಸ್ಥಾನವಿದೆ.

ಬಾಳೆಹಣ್ಣನ್ನು ಕಾಯಿ, ಹಣ್ಣು ಎರಡೂ ರೂಪಗಳಲ್ಲಿ ಸೇವಿಸುತ್ತೇವೆ. ಕಾಯಿ ಇದ್ದಾಗ ಬಾಳೆಹಣ್ಣಿನ ಸಿಪ್ಪೆ ಬಣ್ಣ ಹಸಿರು ಇದ್ದರೆ, ಅದು ಹಣ್ಣಾದಂತೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆದರೆ ನೀಲಿ ಬಾಳೆಹಣ್ಣುಗಳ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?

ನೀಲಿ ಬಣ್ಣ ಮತ್ತು ಕೆನೆ ವಿನ್ಯಾಸವನ್ನು ಹೊಂದಿರುವ ಮತ್ತೊಂದು ಬಗೆಯ ಬಾಳೆಹಣ್ಣು ಇದೆ. ಇದನ್ನು ನೀಲಿ ಜಾವಾ ಬಾಳೆಹಣ್ಣು ಎಂದು ಕರೆಯಲಾಗುತ್ತದೆ. ನೀಲಿ ಜಾವಾ ಬಾಳೆಹಣ್ಣು ಹೈಬ್ರಿಡ್ ಆಗಿದೆ. ಮೂಸಾ ಬಾಲ್ಬಿಸಿಯಾನಾ ಮತ್ತು ಮೂಸಾ ಅಕ್ಯುಮಿನಾಟಾ ಸೇರಿದ ಹೈಬ್ರೀಡ್. ಒಗಿಲ್ವಿಯದ ಮಾಜಿ ಗ್ಲೋಬಲ್ ಚೀಫ್ ಕ್ರಿಯೇಟಿವ್ ಅಧಿಕಾರಿ ಥಾಮ್ ಖೈ ಮೆಂಗ್ ಅವರು ಇತ್ತೀಚೆಗೆ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಈ ಬಗ್ಗೆ ಶೇರ್ ಮಾಡಿದ್ದಾರೆ.

“ನೀಲಿ ಜಾವಾ ಬನಾನಾಸ್ ನೆಡಲು ಯಾರೂ ನನಗೆ ಹೇಳಲಿಲ್ಲ. ಇದಕ್ಕೆ ವೆನಿಲ್ಲಾ ಐಸ್ ಕ್ರೀಂನಂತೆಯೇ ರುಚಿ ಇದೆ”ಎಂದು ಅವರು ಬಾಳೆಹಣ್ಣಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಹಣ್ಣನ್ನು ಮುಖ್ಯವಾಗಿಆಗ್ನೇಯ ಏಷ್ಯಾದಲ್ಲಿ ಬೆಳೆಯಲಾಗುವುದು ಎಂದು ಹೇಳಲಾಗಿದ್ದು, ಇದು ಹವಾಯಿಯಲ್ಲಿ ಹೆಚ್ಚು ಜನಪ್ರಿಯವಾಗಿದೆ ಮತ್ತು ಇದನ್ನು ‘ಐಸ್ ಕ್ರೀಮ್ ಬಾಳೆಹಣ್ಣು’ ಎಂದು ಕರೆಯಲಾಗುತ್ತದೆ ಎಂದಿದ್ದಾರೆ.

ಈ ಹಣ್ಣಿನ ಬಗ್ಗೆ ಸತ್ಯವನ್ನು ವಿವರಿಸುವ ಅಮೆಜೋಪೀಡಿಯಾ ಲಿಂಕ್ ಅನ್ನು ಅವರು ಹಂಚಿಕೊಂಡಿದ್ದಾರೆ. ಅಮೆಜೋಪೀಡಿಯಾದ ಪ್ರಕಾರ, ಈ ನೀಲಿ ಜಾವಾ ಬಾಳೆಹಣ್ಣುಗಳು 15 ರಿಂದ 20 ಅಡಿ ಎತ್ತರಕ್ಕೆ ಬೆಳೆಯಬಹುದು ಮತ್ತು ಮರದ ಎಲೆಗಳು ಬೆಳ್ಳಿ-ಹಸಿರು ಬಣ್ಣದಲ್ಲಿರುತ್ತವೆ.


ಥಾಮ್ ಖೈ ಮೆಂಗ್ ಅವರ ಟ್ವೀಟ್ ನೋಡಿ ನೆಟ್ಟಿಗರು ಅಚ್ಚರಿಗೊಳಪಟ್ಟಿದ್ದಾರೆ. ಒಬ್ಬರು ನಾವು ಅದ್ಭುತ, ವೈವಿಧ್ಯಮಯ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

Source: Suvarna News