ನಾಳೆ 1.25 ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿ
ಮೈಸೂರು,ಸೆ.15-ಇದೇ ಸೆ.17ರಂದು ದೇಶಾ ದ್ಯಂತ ಬೃಹತ್ ಕೋವಿಡ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಮೈಸೂರು ಜಿಲ್ಲೆಯಲ್ಲಿ ಈ ಅಭಿಯಾನವನ್ನು ಸಂಪೂರ್ಣ ಯಶಸ್ವಿಗೊಳಿ ಸಲು ಎಲ್ಲಾ ಅಧಿಕಾರಿಗಳು ಸೂಕ್ತ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದರು.
ಬಹಳ ದೊಡ್ಡ ಪ್ರಮಾಣದಲ್ಲಿ ಕೋವಿಡ್ ಲಸಿಕಾ ಅಭಿಯಾನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಬುಧವಾರ ವೀಡಿಯೋ ಸಭೆ ನಡೆಸಿ, ಈ ಸೂಚನೆ ನೀಡಿದರು.
ಸೆ.17ರಂದು ಮೈಸೂರು ಜಿಲ್ಲೆಗೆ 1.25 ಲಕ್ಷ ಲಸಿಕೆ ಹಾಕುವ ಗುರಿ ನೀಡಲಾಗಿದೆ. ಈ ಹಿಂದೆ ನಡೆದ ಲಸಿಕಾ ಅಭಿಯಾನಗಳಲ್ಲಿ ಜಿಲ್ಲೆಯಲ್ಲಿ ಒಂದೇ ದಿನ ಗರಿಷ್ಠ 60 ಸಾವಿರದವರೆಗೆ ಲಸಿಕೆ ಹಾಕಲಾ ಗಿದೆ. ಈಗಿನ ಗುರಿ 1.25 ಲಕ್ಷ ಆಗಿರುವುದರಿಂದ ಈ ಅಭಿಯಾನವನ್ನು ವಿಶೇಷವಾಗಿ ತೆಗೆದುಕೊಂಡು ಗುರಿ ಮುಟ್ಟಲೇಬೇಕು ಎಂದರು.
ಇದುವರೆಗೂ ಆಗಿರುವ ಲಸಿಕೆ ಅಭಿಯಾನ ಕ್ಕಿಂತ ಶುಕ್ರವಾರ ಹಮ್ಮಿಕೊಂಡಿರುವ ಲಸಿಕಾ ಅಭಿ ಯಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಸೆ.17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ವಾಗಿರುವುದು ವಿಶೇಷ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಜಿಲ್ಲಾದ್ಯಂತ 600 ಲಸಿಕಾ ಕೇಂದ್ರ ಗಳನ್ನು ಗುರುತಿಸಿದ್ದಾರೆ. ಈ ಕೇಂದ್ರಗಳಲ್ಲಿ ವ್ಯಾಕ್ಸಿ ನೇಷನ್ ಆಗಬೇಕು. ಇದಕ್ಕಾಗಿ ತಹಸೀ ಲ್ದಾರ್, ತಾಪಂ ಇಓಗಳು, ತಾಲೂಕು ವೈದ್ಯಾಧಿಕಾರಿ ಮತ್ತಿತರ ಅಧಿಕಾರಿ ನಿಮಗೆ ಸೀಮಿತವಾಗಿರುವ ಬೂತ್‍ಗಳಿಗೆ ತೆರಳಿ ಪರಿಶೀಲನೆ ಮಾಡಬೇಕು. ಚುನಾವಣಾ ಕೆಲಸದ ಮಾದರಿಯಲ್ಲಿ ಅಧಿಕಾರಿ ಗಳು ಕಾರ್ಯನಿರ್ವಹಿಸಿ, ಈ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಲಸಿಕೆ ನೀಡಲು ಜನರನ್ನು ಗುರುತಿಸಬೇಕು. ಇದ ಕ್ಕಾಗಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆ ಯರನ್ನು ಬಳಸಿಕೊಳ್ಳಬೇಕು. ಅಭಿಯಾನವನ್ನು ಯಶಸ್ವಿಗೊಳಿಸಲು ಅಧಿಕಾರಿಗಳು ಸೇರಿದಂತೆ ಇತರೆ ಆರೋಗ್ಯ ಸಿಬ್ಬಂದಿಗಳು ಕಳೆದ ಬಾರಿಗಿಂತ ಹೆಚ್ಚಿನ ಶ್ರಮ ಹಾಕಿ ಕೆಲಸ ಮಾಡಬೇಕು ಎಂದರು.
ಕೋವಿಡ್ ಪರೀಕ್ಷೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕು. ಕೋವಿಡ್ ನಿಯಂತ್ರಿಸಲು ಕಡ್ಡಾಯ ವಾಗಿ ಆರ್‍ಟಿಪಿಸಿಆರ್ ಟೆಸ್ಟ್ ಮಾಡಬೇಕು. ಕೋವಿಡ್ ನಿಯಂತ್ರಿಸಲು ಪರೀಕ್ಷೆ ಪ್ರಮುಖ ಮಾರ್ಗವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಈಗ ಕೋವಿಡ್ ಪರಿಸ್ಥಿತಿ ನಿಯಂ ತ್ರಣದಲ್ಲಿರುವುದರ ಶ್ರೇಯಸ್ಸು ಕ್ಷೇತ್ರಮಟ್ಟದಲ್ಲಿ ಕೆಲಸ ನಿರ್ವಹಿಸಿದ ಎಲ್ಲಾ ಅಧಿಕಾರಿಗಳಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು. ಸಭೆಯಲ್ಲಿ ಜಿಪಂ ಸಿಇಓ ಎ.ಎಂ.ಯೋಗೀಶ್, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀ ಕಾಂತ್ ರೆಡ್ಡಿ, ಎಡಿಸಿ ಡಾ.ಬಿ.ಎಸ್.ಮಂಜುನಾಥ ಸ್ವಾಮಿ, ಡಿಎಚ್‍ಒ ಡಾ.ಕೆ.ಎಚ್.ಪ್ರಸಾದ್, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಮಹದೇವ ಪ್ರಸಾದ್, ಆರ್‍ಸಿಹೆಚ್ ಅಧಿಕಾರಿ ಡಾ.ಜಯಂತ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಿವಪ್ರಸಾದ್, ಎಂಎಂಸಿ ಆರ್‍ಐ ನಿರ್ದೇಶಕ ಡಾ.ಸಿ.ಪಿ.ನಂಜರಾಜ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಷಾದ್ ರೆಹಮಾನ್ ಶರೀಫ್, ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗ ರಾಜು ಸೇರಿದಂತೆ ಇತರರು ಹಾಜರಿದ್ದರು.
Source:mysurumithra