Nagarahole Bird survey | ನಾಗರಹೊಳೆಯಲ್ಲಿ ಪಕ್ಷಿ ಗಣತಿ: 290 ಪ್ರಭೇದ ದಾಖಲು

Feb 13, 2023

Bird Survey in Nagarahole: ಅಲ್ಲಿ ಪಕ್ಷಿ ತಜ್ಞರಿದ್ದರು, ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರೂ ಇದ್ದರೂ. ಸುಮಾರು ಎಂಟು ರಾಜ್ಯಗಳಿಂದ ಬಂದು ಹುಲಿ ಸಂರಕ್ಷಿತ ಪ್ರದೇಶವಾದ ನಾಗರಹೊಳೆಯಲ್ಲಿ ಒಟ್ಟಿಗೆ ಸೇರಿದ್ದರು. ನಾಲ್ಕು ದಿನಗಳು ಕಾಡಿನ ಭಾಗದಲ್ಲಿ ನಡೆದು ಪಕ್ಷಿಗಳ ಲೋಕವನ್ನು ದಾಖಲು ಮಾಡುವ ಕಾರ್ಯ ನಡೆಸಿದರು. ಒಟ್ಟು ಸುಮಾರು 900 ಕಿ.ಮೀ. ಸಂಚಾರದಲ್ಲಿ ಇನ್ನೂರತ್ತೊಂಬತ್ತು ಪ್ರಭೇದದ ಪಕ್ಷಿಗಳನ್ನು ಗುರುತಿಸಲಾಗಿದೆ.

ಮೈಸೂರು: ನಾಗರಹೊಳೆ (Nagarahole) ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದ ಪಕ್ಷಿ ಗಣತಿಯಲ್ಲಿ (Bird survey) ಅಪರೂಪದ ಪಕ್ಷಿಗಳಾದ ಪಟ್ಟೆತಲೆ ಹೆಬ್ಬಾತು, ಮಲ್‌ಬಾರ್‌ ವುಡ್‌ಶ್ರೈಕ್‌, ಕೆಂದಲೆ ರಣಹದ್ದು ಸೇರಿದಂತೆ 290 ಪಕ್ಷಿ ಪ್ರಭೇದಗಳು ಕಂಡುಬಂದಿವೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ವನ್ಯಜೀವಿ ವಲಯಗಳಲ್ಲಿ ಫೆ. 9ರಿಂದ ನಾಲ್ಕು ದಿನ ನಡೆದ ಪಕ್ಷಿ ಸಮೀಕ್ಷೆಯಲ್ಲಿ ಪಕ್ಷಿಲೋಕದ ಹಲವು ಅಚ್ಚರಿಗಳು ಬೆಳಕಿಗೆ ಬಂದಿವೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಪಕ್ಷಿಪ್ರಿಯರು ಸುಮಾರು 290 ಪಕ್ಷಿ ಪ್ರಭೇದಗಳನ್ನು ಗುರುತಿಸಿದ್ದಾರೆ.

ಅದರಲ್ಲಿಯೂ ಪಟ್ಟೆತಲೆ ಹೆಬ್ಬಾತು, ಮಲ್‌ಬಾರ್‌ ವುಡ್‌ಶ್ರೈಕ್‌, ಕೆಂದಲೆ ರಣಹದ್ದು, ಬಿಳಿ ಬೆನ್ನಿನ ರಣಹದ್ದು, ಬ್ಲಾಕ್‌ ಬಾಜಾ, ಕರಿ ಗಿಡುಗ, ಅಲ್ಟ್ರ ಮರೇನ್‌ಫ್ಲೈ ಕ್ಯಾಚರ್‌ ಮತ್ತು ನಾಬ್‌ ಬಿಲ್ಡ್‌ ಡಕ್‌ ಅಪರೂಪದ ಪಕ್ಷಿ ಸಂಕುಲಗಳಾಗಿವೆ. ಸುಮಾರು 8 ರಾಜ್ಯಗಳಿಂದ ಬಂದಿದ್ದ ಪಕ್ಷಿತಜ್ಞರು, ಪಕ್ಷಿ ವೀಕ್ಷಕರು, ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರಿಗೆ (ಒಟ್ಟು 118 ಮಂದಿ) ನೋಂದಣಿ ಮಾಡಿಕೊಂಡು ನಂತರ ಪಕ್ಷಿ ವೀಕ್ಷಣೆಯ ಮತ್ತು ಮಾಹಿತಿ ಸಂಗ್ರಹಣೆ ಬಗ್ಗೆ ತರಬೇತಿ ನೀಡಲಾಯಿತು.

ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶ ವ್ಯಾಪ್ತಿಯ ವನ್ಯಜೀವಿ ವಲಯಗಳಾದ ಅಂತರಸಂತೆ, ಡಿ.ಬಿ.ಕುಪ್ಪೆ, ಮೇಟಿಕುಪ್ಪೆ, ನಾಗರಹೊಳೆ, ಕಲ್ಲಹಳ್ಳ, ಆನೆಚೌಕೂರು, ಹುಣಸೂರು ಮತ್ತು ವೀರನಹೊಸಹಳ್ಳಿ ವನ್ಯಜೀವಿ ವಲಯಗಳಿಗೆ ತಂಡಗಳನ್ನು ಹಂಚಿಕೆ ಮಾಡಲಾಯಿತು. ಆಯಾ ತಂಡದವರು ತಮಗೆ ವಹಿಸಿದ ವಲಯದಲ್ಲಿ ಸಮೀಕ್ಷೆ ನಡೆಸಿದರು.

900 ಕಿ.ಮೀ. ವ್ಯಾಪ್ತಿಯಲ್ಲಿ ಗಣತಿ:

ಗಣತಿಯ ಮೊದಲ ದಿನ ಬೆಳಗ್ಗೆ ಎಲ್ಲಾ ಗಸ್ತುಗಳಲ್ಲಿ ಪಕ್ಷಿ ವೀಕ್ಷಣೆಗೆ ತೆರಳಿ ಪಕ್ಷಿಗಳ ಮಾಹಿತಿಯನ್ನು ಸಂಗ್ರಹಿಸಿದರು. ಎರಡನೇ ದಿನ ವಿವಿಧ ಗಸ್ತುಗಳಲ್ಲಿ ಇರುವಂತಹ 2 ಕಿ.ಮೀ ಟ್ರ್ಯಾಂಜಾಕ್ಟ್ ಲೈನ್‌ಗಳಲ್ಲಿ ಪ್ರತಿ 400 ಮೀಟರ್‌ಗೆ ಒಂದು ಪರಿಶೀಲನಾ ಪಟ್ಟಿ (ಚೆಕ್‌ ಲಿಸ್ಟ್‌)ಯನ್ನು ಇ-ಬರ್ಡ್‌ ಮತ್ತು ಪಕ್ಷಿಗಳ ಕೈಪಿಡಿಯಲ್ಲಿ ನಮೂದಿಸಿದರು. ಎರಡು ದಿನಗಳಲ್ಲಿ 900 ಕಿ.ಮೀ.ಗಿಂತಲೂ ಹೆಚ್ಚು ದೂರವನ್ನು ಗಸ್ತು ತಿರುಗಿ ಪಕ್ಷಿ ಗಣತಿ ಕೈಗೊಳ್ಳಲಾಯಿತು.

ಮಾಹಿತಿ ವಿಂಗಡಣೆ:
ಗಣತಿಯಲ್ಲಿ ದಾಖಲಾದ ಪಕ್ಷಿಗಳ ಆವಾಸ ಸ್ಥಾನ, ಗುಣಲಕ್ಷಣಗಳು ಮತ್ತು ಸಂಖ್ಯೆಗಳ ಕ್ರೂಢೀಕರಿಸಿದ ಮಾಹಿತಿಯನ್ನು ಆಯಾ ವಲಯಗಳ ಸಮನ್ವಯಾಧಿಕಾರಿಗಳು ಮಾಹಿತಿ ವಿಂಗಡಿಸಿದರು. ಈ ಸಾಲಿನಲ್ಲಿ ನಡೆದ ಪಕ್ಷಿ ವೀಕ್ಷಣೆಯ ಪ್ರಮುಖ ಅಂಶಗಳನ್ನು ಗುರುತಿಸಿ ಭಾಗವಹಿಸಿದವರಿಗೆ ಅಧಿಕಾರಿಗಳು ತಿಳಿಸಿದರು. ವೀರನಹೊಸಹಳ್ಳಿ ವನ್ಯಜೀವಿ ವಲಯದಲ್ಲಿ ನಡೆದ ಮುಕ್ತಾಯ ಸಮಾರಂಭದಲ್ಲಿ ಜಂಗಲ್‌ ಲಾಡ್ಜ್‌ ಮತ್ತು ರೆಸಾರ್ಟ್ಸ್ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ಕುಮಾರ್‌, ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ಸಿ.ಹರ್ಷಕುಮಾರ್‌ ಇದ್ದರು.