ನಮ್ ಕನ್ನಡತಿಯ ಭುವಿ ಮೇಡಂ ಹಿಂಗೆಲ್ಲಾ ಚೇಂಜ್ ಆಗೋದಾ?

Feb 10, 2021

TRP ವಿಚಾರಕ್ಕೆ ಬಂದರೆ ನಮ್ ಕನ್ನಡತಿ ಸೀರಿಯಲ್ದೇ ಒಂದು ಕತೆ. ಬೇರೆಲ್ಲ ಸೀರಿಯಲ್ ಹಣೆ ಬರಹ ಏನೋ ಗೊತ್ತಿಲ್ಲ, ಆದರೆ ಈ ಸೀರಿಯಲ್‌ನ ಕತೆ ನೋಡ್ಕೊಂಡೇ ಈ ಸಲ TRP ಹೇಗಿರುತ್ತೆ ಅಂತ ಗೆಸ್ ಮಾಡಬಹುದು. ಹರ್ಷ ಭುವಿ ಸಣ್ಣಗೆ ಕಾಲೆಳೆದು ಕೊಳ್ಳುತ್ತಾ, ಮನಸ್ಸಿಂದ ಒಬ್ಬರನ್ನೊಬ್ಬರು ಇಷ್ಟ ಪಡುವಾಗ ನೋಡುಗರ ಎದೆಯಲ್ಲೂ ಕಚಗುಳಿ. ಅವರು ಖುಷಿಯಿಂದಲೇ ಕೊನೇ ತನಕ ಸೀರಿಯಲ್ ನೋಡಿ ನಾಳೆ ಏನಾಗಬಹುದಪ್ಪಾ ಅಂತ ಚಡಪಡಿಸಿ ಎಫ್‌ಬಿಲ್ಲೇನಾದ್ರೂ ಅಪ್‌ಡೇಟ್‌ ಮಾಡಿದ್ದಾರಾ ಅಂತ ಆಗಾಗ ಚೆಕ್ ಮಾಡ್ಕೊಳ್ತಾ ಇರ್ತಾರೆ. ಅದೇ ಸೀರಿಯಲ್ ಕತೆ ಕೊಂಚ ಸೀರಿಯಸ್ ಆಯ್ತು, ವಿಲನ್ ಸಾನಿಯಾ ಮತ್ತು ಆದಿ ಕತೆ ಶುರುವಾಯ್ತು, ವರೂಧಿನಿ ಕತೆ ಶುರುವಾಯ್ತು, ಅಥವಾ ಭುವಿ ತಂಗಿ ರಂಜಿನಿ ಉದ್ದುದ್ದ ಮಾತನ್ನು ನಿಧಾನಕ್ಕೆ ಆಡಲು ಶುರು ಮಾಡಿದಳು ಅಂದರೆ ಟಿಆರ್‌ಪಿ ಕಥೆ ಢಂ. ಆದರೆ ಕತೆ ಓಡಲೇ ಬೇಕಲ್ವಾ, ಎಷ್ಟು ಅಂತ ಅವರವರ ಕತೆಯನ್ನೇ ಮತ್ತೆ ಮತ್ತೆ ಹೇಳೂದಕ್ಕೆ ಸಾಧ್ಯ. ಸೋ ಕೆಲವು ದಿನಗಳ ಹಿಂದೆ ಹರ್ಷ ಭುವಿಯನ್ನು ಒಟ್ಟಿಗೆ ತರುವ ನಿಟ್ಟಿನಲ್ಲಿ. ಅವರಿಬ್ಬರನ್ನೂ ಒಂದಾಗಿಸುವ ನಿಟ್ಟಿನಲ್ಲಿ ಸಾಗುತ್ತಿದ್ದ ಕತೆ ಈಗ ಚೇಂಜ್ ಆಗಿದೆ. ವರೂಧಿನಿ ಜೈಲಿನಿಂದ ಹೊರ ಬಂದು ಹರ್ಷನನ್ನು ತಬ್ಕೊಂಡು ಬಿಟ್ಟಿದ್ದಾಳೆ. ಭುವಿಯೇ ಅವಳನ್ನು ಜೈಲಿಂದ ಹೊರತಂದರೂ ಅವಳತ್ತ ಕಣ್ಣೆತ್ತಿಯೂ ನೋಡಿಲ್ಲ. ಅಲ್ಲಿಗೆ ಇನ್ನು ಮೇಲೆ ಅವಳು ಹರ್ಷನ್ನ ಬಿಡೋ ಥರ ಕಾಣ್ತಿಲ್ಲ. ಹರ್ಷನಿಗೋಸ್ಕರ ಏನು ಮಾಡಲೂ ಸಿದ್ಧಳಿರುವ ಆಕೆ ನೆಕ್ಸ್ಟ್ ಇವರಿಬ್ಬರ ಸಂಬಂಧವನ್ನು ದೂರ ಮಾಡೋದು ಗ್ಯಾರೆಂಟಿ.

ಇದೆಲ್ಲ ಸೀರಿಯಲ್ ಕತೆ ಆಯ್ತು. ಆದರೆ ರಿಯಲ್‌ನಲ್ಲೂ ರಂಜಿನಿ ಕನ್ನಡ ಮೇಡಂ ಥರ ಆಡೋಕೆ ಶುರು ಮಾಡಿದ್ದಾರೆ ಅಂತಾರೆ. ಅವರ ಇನ್‌ಸ್ಟಾಗ್ರಾಮ್ ಅಕೌಂಟ್ ನೋಡಿದ್ರೇ ಗೊತ್ತಾಗುತ್ತೆ. ಅದರಲ್ಲಿ ತೀರಾ ಸಿಂಪಲ್ ಚೂಡಿದಾರ ತೊಟ್ಟು, ಕಾಡಿನ ನಡುವೆ ಎಲ್ಲೋ ಕೂತು ಫೊಟೋಗೆ ಫೋಸ್ ಕೊಟ್ಟಿದ್ದಾರೆ. ಜೊತೆಗೆ ಅವರ ಅಭಿಮಾನಿಗಳಿಗೆ ಸರಳತನದ ಪಾಠ ಮಾಡಿದ್ದಾರೆ. ಅದರಲ್ಲೊಂದು ‘ಸರಳತೆಯೇ ನಿಜವಾದ ಅತ್ಯಾಧುನಿಕತೆ’ ಅನ್ನೋ ಪಾಠ. ಇದು ಇಂಗ್ಲೀಷ್‌ನ ‘ಸಿಂಪ್ಲಿಸಿಟಿ ಈಸ್ ದ ಅಲ್ಟಿಮೇಟ್ ಸೊಫೆಸ್ಟಿಕೇಶನ್’ ಅನ್ನುವ ಕೋಟ್‌ನ ಕನ್ನಡಾನುವಾದ. ಮೊದಲೆಲ್ಲ ಇಂಗ್ಲೀಷ್‌ನ ಕೋಟ್‌ಗಳನ್ನೇ ಹೆಚ್ಚೆಚ್ಚು ಉದ್ಗರಿಸುತ್ತಿದ್ದ ರಂಜಿನಿ ಈಗ ಪ್ರೆಸ್ ಮೀಟ್‌ಗಳಲ್ಲೂ ಅಪ್ಪಟ ಕನ್ನಡ ಮಾತಾಡಿ, ಪತ್ರಕರ್ತರನ್ನು ಬೆಚ್ಚಿ ಬೀಳಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಏನಾದ್ರೂ ಹೇಳ್ಬೇಕು ಅಂದ್ರೆ, ಅದಕ್ಕೆ ಸರಿಯಾದ ಕನ್ನಡ ಕೋಟ್‌ಗಳು ಸಿಗದಿದ್ದರೆ ಇಂಗ್ಲೀಷ್ ಕೋಟ್ಸ್ ಅನ್ನೇ ಕನ್ನಡಕ್ಕೆ ಅನುವಾದಿಸಿ ಹಾಕುವಷ್ಟರ ಮಟ್ಟಿಗೆ ಕನ್ನಡ ಪ್ರೀತಿ ಬೆಳೆಸಿಕೊಂಡಿದ್ದಾರೆ.

ಜೊತೆಗೆ ಬದುಕು ಸರಳವಾಗಿರಬೇಕು, ಚಿಂತನೆಗಳು ಉನ್ನತವಾಗಿರಬೇಕು ಅನ್ನೋದನ್ನೂ ಹೇಳಿದ್ದಾರೆ. ಭುವಿ ಮೇಡಂ ಪಾಠಕ್ಕೆ ಅಭಿಮಾನಿಗಳು ತಲೆದೂಗಿದ್ದಾರೆ.

ಇದರ ಜೊತೆಗೆ ‘ಕನ್ನಡತಿ’ ಸೀರಿಯಲ್‌ನಲ್ಲಿ ಕನ್ನಡ ಪಾಠ ಮಾಡೋ ಫೋಟೋವನ್ನೂ ರಂಜಿನಿ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ ಭುವಿ ಮೇಡಂ ಅನ್ನೋ ಕ್ಯಾಪ್ಷನ್ನೂ ಕೊಟ್ಟಿದ್ದಾರೆ. ನಮಸ್ತೇ ಭುವಿ ಮೇಡಂ, ತುಂಬ ಚೆಂದ ಕಾಣುತ್ತಿದ್ದೀರಿ.., ನಮಸ್ಕಾರ ಭುವಿ ಮೇಡಂ, ಅಂತೆಲ್ಲ ಪಕ್ಕಾ ಕಾಲೇಜ್ ಸ್ಟೂಡೆಂಟ್ ರೀತಿ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ನಿಮ್ ಥರ ಶಿಕ್ಷಕಿ ಇದ್ದರೆ ಯಾರು ಬೇಕಾದರೂ ಕನ್ನಡ ಕಲಿಯಬಹುದು ಅನ್ನುವಂಥಾ ಕಮೆಂಟ್‌ಗಳೂ ಬಂದಿವೆ.

ಸದ್ಯ ಭುವಿ ಮೇಡಂ ಅರ್ಥಾತ್ ರಂಜಿನಿ ರಾಘವನ್ ಕೈ ತುಂಬಾ ಸಿನಿಮಾ ಅವಕಾಶಗಳಿವೆ. ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರ ಅಪ್ಪಟ ಮಲೆನಾಡು ಹಿನ್ನೆಲೆಯಲ್ಲಿ ಚಿತ್ರಿತವಾದರೆ, ಅವಸ್ಥಾಂತರ ಅನ್ನೋ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಇದರಲ್ಲಿ ಸಂಚಾರಿ ವಿಜಯ್ ಜೊತೆಗೆ ರಂಜಿನಿ ಅಭಿನಯಿಸಿದ್ದಾರೆ. ಸೀರಿಯಲ್, ಸಿನಿಮಾ ಈ ಎರಡರಲ್ಲಿ ನಮಗ್ಯಾವುದು ಇಷ್ಟ ಅಂದರೆ ರಂಜಿನಿ ಸಿನಿಮಾ ಅಂತಲೇ ಹೇಳುತ್ತಾರೆ. ಏಕೆಂದರೆ, ಸಿನಿಮಾ ಹತ್ತು ವರ್ಷಗಳ ಬಳಿಕವೂ ನೋಡಬಹುದು. ಆದರೆ ಸೀರಿಯಲ್ ಹಾಗಲ್ಲ. ಅದು ಮುಗಿದ ಮೇಲೆ ಮುಗಿಯಿತು ಅಷ್ಟೇ, ಅನ್ನೋದು ಸದ್ಯಕ್ಕೆ ರಂಜಿನಿ ಮೇಡಂ ಅರ್ಥಾತ್ ಭುವಿ ಮೇಡಂ ಅಭಿಪ್ರಾಯ. ನೀವೇನಂತೀರಿ?

Source:Suvarnanews