ನಮಗೆ ಜನರ ಹಿತರಕ್ಷಣೆಯೇ ಮುಖ್ಯ, ಬಂಡವಾಳಶಾಹಿಗಳದ್ದಲ್ಲ: ಆರೋಪಗಳಿಗೆ ರೊಚ್ಚಿಗೆದ್ದು ಉತ್ತರಿಸಿದ ನಿರ್ಮಲಾ ಸೀತಾರಾಮನ್

Feb 13, 2021

2019ರ ಚುನಾವಣಾ ಪ್ರಣಾಳಿಕೆಯಲ್ಲಿ ಇದೇ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದ ಕಾಂಗ್ರೆಸ್​ನ ಅಸಲಿ ಬಣ್ಣ ಈಗ ಬಯಲಾಗಿದೆ ಎಂದು ಬಜೆಟ್ ಚರ್ಚೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವ್ಯಂಗ್ಯ ಮಾಡಿದರು

ದೆಹಲಿ: ಕೊರೊನಾ ಪಿಡುಗು ಒಡ್ಡಿದ ಸವಾಲುಗಳನ್ನು ಮೀರಿ ಕೇಂದ್ರ ಸರ್ಕಾರ ದೀರ್ಘಕಾಲದ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಲೋಕಸಭೆಯಲ್ಲಿ ಬಜೆಟ್ (Budget 2021) ಕುರಿತ ಚರ್ಚೆಯಲ್ಲಿ ಹೇಳಿದರು.ಬಿಜೆಪಿ ಸರ್ಕಾರ ಕೇಂದ್ರದಲ್ಲಿ ರಚನೆಯಾದಾಗಿನಿಂದ ಜಾರಿಗೊಳಿಸಿದ ಬದಲಾವಣೆಗಳನ್ನು ಅಂಕಿಅಂಶಗಳ ಸಮೇತ ಲೋಕಸಭಾ ಸದಸ್ಯರಿಗೆ ವಿವರಿಸಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕೇವಲ ಯೋಜನೆಗಳನ್ನು ಘೋಷಿಸಿ ತಮಗೆ ಬೇಕಾದವರಿಗೆ ಮಾತ್ರ ಬಳಸಿಕೊಳ್ಳುತ್ತಿದ್ದರೇ ಹೊರತು, ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸದೇ ವ್ಯರ್ಥ ಮಾಡುತ್ತಿದ್ದರು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅವರ ಭಾಷಣದ ಮಧ್ಯೆಯೇ ಆಗಾಗ ಗದ್ದಲವೆಸಗಿ ಕೃಷಿ ಕಾಯ್ದೆಗಳ ಕುರಿತು ಸ್ಪಷ್ಟನೆ ನಿಡುವಂತೆ ವಿಪಕ್ಷಗಳ ಸದಸ್ಯರು ಒತ್ತಾಯಿಸಿದರೂ, ತಮ್ಮ ಹರಿತ, ವ್ಯಂಗ್ಯ ಭಾಷಣದ ವೈಖರಿಯಿಂದಲೇ ವಿಪಕ್ಷ ಸದಸ್ಯರ ಗದ್ದಲವನ್ನು ತಣ್ಣಗಾಗಿಸಿದರು.

ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ನೀಡಿದ ಆದ್ಯತೆಯನ್ನು ವಿವರಿಸಿದ ಅವರು, ಕೊರೊನಾದಂತಹ ಕಷ್ಟದ ಕಾಲದಲ್ಲಿ ನೈರ್ಮಲ್ಯ, ಶುದ್ಧ ಕುಡಿಯುವ ನೀರು ಸೇರಿದಂತೆ ಆರೋಗ್ಯ ಕ್ಷೇತ್ರವನ್ನು ವಿಶ್ವದಲ್ಲೇ ಅತಿ ಹೆಚ್ಚು ಬಲಾಢ್ಯಗೊಳಿಸುವತ್ತ ಬಜೆಟ್ ಮೂಲಕ ಸರ್ಕಾರ ಹೆಜ್ಜೆಯಿಟ್ಟಿದೆ ಎಂದು ತಿಳಿಸಿದರು. 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಇದೇ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದ ಕಾಂಗ್ರೆಸ್​ನ ಅಸಲಿ ಬಣ್ಣ ಈಗ ಬಯಲಾಗಿದೆ ಎಂದು ವ್ಯಂಗ್ಯ ಮಾಡಿದರು. ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ ನಂತರ ದೇಶದ ಒಂದಾದರೂ ಎಪಿಎಂಸಿಗಳು ಮುಚ್ಚಲ್ಪಟ್ಟಿದ್ದರೆ ಉದಾಹರಣೆ ನೀಡಿ ಎಂದು ವಿಪಕ್ಷಗಳಿಗೆ ಸವಾಲೆಸೆದರು. ಅಲ್ಲದೇ, ಕಾಂಗ್ರೆಸ್ ಪಕ್ಷ ಉತ್ತಮ ಆರ್ಥಿಕ ತಜ್ಞರಾಗಿದ್ದ ಮನಮೋಹನ್ ಸಿಂಗ್​ರ ವಿಚಾರಧಾರೆಗಳಿಗೆ ಅವಮಾನ ಮಾಡುತ್ತಿವೆ. ದೇಶದ ಅಭಿವೃದ್ಧಿಯ ಕುರಿತು ವಿಪಕ್ಷಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ ಎಂದು ಹರಿಹಾಯ್ದರು.

ರಕ್ಷಣಾ ಕ್ಷೇತ್ರ ಇನ್ನಷ್ಟು ಸಬಲ
2013-14ರಲ್ಲಿ ರಕ್ಷಣಾ ಕ್ಷೇತ್ರಕ್ಕೆ 1,16,139 ಲಕ್ಷ ಸಾವಿರ ಕೋಟಿ ವಿನಿಯೋಗಿಸಲಾಗಿತ್ತು. ಆದರೆ ಈ ಆರ್ಥಿಕ ವ್ಷದಲ್ಲಿ ಇದುವರೆಗೆ 2 ಲಕ್ಷ ಸಾವಿರ ಕೋಟಿಯನ್ನು ಮೀರಿದೆ ಎಂದು ವಿವರಿಸಿದರು. ಹಳೆಯ ಸರ್ಕಾರಗಳು ಕೇವಲ ಕಾಗದ ಪತ್ರದಲ್ಲೇ ಅಭಿವೃದ್ಧಿ ಮಾಡುತ್ತಿದ್ದವೇ ಹೊರತು, ಬಿಜೆಪಿ ಸರ್ಕಾರದ ರಚನೆಯಾದ ನಂತರವೇ ದೇಶ ನೈಜ ಅಭಿವೃದ್ಧಿ ಕಂಡಿದೆ ಎಂದರು.

ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಜನತೆ ಸಹ ಈಗ ಮುದ್ರಾದಂತಹ ಯೋಜನೆಯನ್ನು ಬಳಸಿಕೊಳ್ಳಲು ಮುಂದೆಬರುತ್ತಿವೆ. 50 ಲಕ್ಷಗಳಕ್ಕೂ ಹೆಚ್ಚು ಜನರು ಇಂತಹ ಯೋಜನೆಗಳಡಿ ನೋಂದಣಿ ಮಾಡಿಕೊಂಡಿದ್ದಾರೆ. ವಲಸೆ ಕಾರ್ಮಿಕರ ಹಿತದೃಷ್ಟಿಯಿಂದಲೂ ಲಾಕ್​ಡೌನ್ ಕಾಲದಲ್ಲಿ ಮುಂಚೂಣಿಯಲ್ಲಿ ನಿಂತು ರಕ್ಷಿಸಲಾಗಿದೆ ಎಂದರು.

2016-17ರ ನಂತರ ಸೌಭಾಗ್ಯ ಸ್ಕೀಮ್ 2.67 ಕೋಟಿ ಮನೆಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. 11 ಕೋಟಿ ಮನೆಗಳಿಗೆ ಶೌಚಾಲಯ ಕಲ್ಪಿಸಲಾಗಿದೆ. ಪಿಎಂ ಗ್ರಾಮ ಸಡಕ್ ಯೋಜನೆಯಡಿ 2.7 ಕೋಟಿ ಕಿಮೀ ರಸ್ತೆ ನಿರ್ಮಿಸಲಾಗಿದೆ ಎಂದರು. ಲಾಕ್​ಡೌನ್ ಘೋಷಣೆಯಾದ 48 ಘಂಟೆಯೊಳಗೆ ಪ್ರಧಾನಿ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾ ಯೋಜನೆ ಘೋಷಿಸುವ ಮೂಲಕ ಬಡಬಗ್ಗರ ಕಲ್ಯಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಪಿಎಂ ಕೇರ್ಸ್ ಹಣದ ಬಗ್ಗೆ ಈಗಲೂ ವಿಪಕ್ಷಗಳು ಸ್ವತಂತ್ರವಾಗಿವೆ ಎಂದು ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿಯವರನ್ನು ಆಹ್ವಾನಿಸಿದರು.

ಎಸ್​ಎಸ್ಟಿ ಅಭಿವೃದ್ಧಿಗೆ 4,800,11 ಕೋಟಿ
ಮೂಲಭೂತ ಸೌಕರ್ಯ, ಅಭಿವೃದ್ಧಿ ಕಾರ್ಯಗಳಿಗೆ ಹಣ ಒಗಿಸುವುದು, ಉದ್ಯೋಗ ಸೃಷ್ಟಿಯು ಆರ್ಥಿಕ ಚೇತರಿಕೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿಯೂ ಕಾರಣವಾಗಲಿದೆ ಎಂದು ವಿಪಕ್ಷ ಸದಸ್ಯ ಪ್ರೇಮಚಂದ್ರನ್ ಕೇಳಿದ ಪ್ರಶ್ನೆಗೆ ಉತ್ತರಿಸಿದರು.ಅಲ್ಪಸಂಖ್ಯಾತ, ಎಸ್​ಎಸ್ಟಿ ಅಭಿವೃದ್ಧಿಗೆ 4,800,11 ಕೋಟಿ ನೀಡಲಾಗಿದ್ದು ಅಂದಾಜು ಮೊತ್ತಕ್ಕಿಂತ ಶೇ 11ರಷ್ಟು ಹೆಚ್ಚು ಹಣ ಒದಗಿಸಲಾಗಿದೆ ಎಂದು ಮಾಹಿತಿ ಒದಗಿಸಿದರು.

Source:TV9Kannada