ನಟಿ ಪದ್ಮಜಾ ರಾವ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ

Feb 11, 2021

ಬೆಂಗಳೂರು(ಫೆ.11): ಸ್ಯಾಂಡಲ್‌ವುಡ್‌ ಹಾಗೂ ಕಿರುತೆರೆ ನಟಿ ಪದ್ಮಜಾ ರಾವ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿದೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಪದ್ಮಜಾ ರಾವ್‌ಗೆ ವಾರೆಂಟ್ ಜಾರಿಯಾಗಿದೆ ಎಂದು ತಿಳಿದು ಬಂದಿದೆ. 

ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ ಸಂಸ್ಥೆಗೆ ನೀಡಿದ 40 ಲಕ್ಷ ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಜೆ.ಎಂ.ಎಫ್‌.ಸಿ ಐದನೇ ನ್ಯಾಯಾಲಯದಿಂದ ಪದ್ಮಜಾ ರಾವ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ ಜಾರಿಯಾಗಿದೆ. ಈ ಸಂಬಂಧ ಬೆಂಗಳೂರಿನ ತಲಘಟ್ಟಪುರ ಪೊಲೀಸ್‌ ಠಾಣೆಗೆ ವಾರೆಂಟ್ ಪ್ರತಿ ರವಾನೆಯಾಗಿದೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ?

ನಟ, ನಿರ್ದೇಶಕ ವಿರೇಂದ್ರ ಶೆಟ್ಟಿ ಒಡೆತನದ ವೀರೂ ಟಾಕೀಸ್ ಪ್ರೊಡಕ್ಷನ್ ಹೌಸ್‌ನಿಂದ ನಟಿ ಪದ್ಮಜಾ ರಾವ್ ಹಂತ ಹಂತವಾಗಿ 41 ಲಕ್ಷ ರೂ. ಸಾಲ ಪಡೆದಿದ್ದರು. ಸಾಲದ ಭದ್ರತೆಗಾಗಿ 40 ಲಕ್ಷ ರೂಪಾಯಿಗಳ ಚೆಕ್‌ ನೀಡಿದ್ದರು. ಪದ್ಮಜಾ ರಾವ್ ಸಾಲ ವಾಪಾಸು ನೀಡದೇ ಇದ್ದಾಗ ಚೆಕ್ ಹಾಕಲಾಗಿತ್ತು. ಖಾತೆಯಲ್ಲಿ ಹಣವಿಲ್ಲದೆ ಚೆಕ್‌ ಬೌನ್ಸ್ ಆಗಿತ್ತು. ಈ ಬಗ್ಗೆ ಮಂಗಳೂರಿನ ಜೆ.ಎಂ.ಎಫ್‌.ಸಿ ಐದನೇ ನ್ಯಾಯಾಲಯದಲ್ಲಿ ಮೊಕದ್ದಮೆ ಕೂಡ ದಾಖಲಿಸಲಾಗಿತ್ತು. ನ್ಯಾಯಾಲಯಕ್ಕೆ ಹಾಜರಾಗಲು ಆದೇಶಿಸಿದ್ದ ಸಮನ್ಸ್‌ ಸ್ವೀಕರಿಸಲು ನಿರಾಕರಿಸುತ್ತಿದ್ದ ಹಿನ್ನೆಲೆಯಲ್ಲಿ ಪದ್ಮಜಾ ರಾವ್ ವಾರೆಂಟ್ ಜಾರಿ ಮಾಡಲಾಗಿದೆ.

Source:Suvarna News