ದೇಶದ ಹೆಮ್ಮೆ ಹಿಮಾ ದಾಸ್‌ ಡಿಎಸ್‌ಪಿಯಾಗಿ ಅಧಿಕಾರ ಸ್ವೀಕಾರ..!

Feb 27, 2021

ನವದೆಹಲಿ: ಇದು ಕಲ್ಲರಳಿ ಹೂವಾದ ಕಥೆ. ಬಡತನದ ಬೇಗೆಯಿಂದ ಬೆಂದು ತನ್ನ ಓಟದ ಮೂಲಕವೇ ಇಂದು ಇಡೀ ದೇಶದ ಮನೆಮಗಳಾಗಿ ಗುರುತಿಸಿಕೊಂಡಿರುವ ಖ್ಯಾತ ಅಥ್ಲೀಟ್‌ ಹಿಮಾ ದಾಸ್‌ ಈಗ ಅಸ್ಸಾಂ ಪೊಲೀಸ್‌ ಇಲಾಖೆಯಲ್ಲಿ ಉಪ ಪೊಲೀಸ್‌ ವರಿಷ್ಠಾಧಿಕಾರಿ(ಡಿಎಸ್‌ಪಿ)ಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.ಇದರೊಂದಿಗೆ ಹಿಮಾ ದಾಸ್‌ ಬಾಲ್ಯದಲ್ಲಿ ಕಂಡಂತಹ ಕನಸು ನನಸಾಗಿದೆ. ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌ ದೇಶದ ಹೆಮ್ಮೆಯ ಕ್ರೀಡಾಪಟುವಿಗೆ ನೇಮಕಾತಿ ಪತ್ರ ನೀಡುವ ಮೂಲಕ ಸನ್ಮಾನಿಸಿದ್ದಾರೆ.

ದೇಶದ ಅತ್ಯಂತ ಪ್ರಮುಖ ಅಥ್ಲೀಟ್‌ ಹಿಮಾ ದಾಸ್‌ ಕೊನೆಗೂ ಬಾಲ್ಯದಲ್ಲಿ ತಾವು ಕಂಡಂತಹ ಕನಸನ್ನು ಕ್ರೀಡೆಯ ಮೂಲಕ ನನಸಾಗಿಸಿಕೊಂಡಿದ್ದಾರೆ.

ಬಾಲ್ಯದಲ್ಲಿದ್ದಾಗಲೇ ಹಿಮಾ ದಾಸ್ ಮುಂದೆ ತಾವೊಂದು ದಿನ ಪೊಲೀಸ್‌ ಅಧಿಕಾರಿಯಾಗಬೇಕು ಎಂದು ಕನಸು ಕಂಡಿದ್ದರಂತೆ, ಇದೀಗ ಡಿಎಸ್‌ಪಿ ಹುದ್ದೆ ಪಡೆಯುವ ಮೂಲಕ ಸುಂದರ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ.

ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಹಿಮಾ ದಾಸ್ ಶಾಲೆಯಲ್ಲಿ ಓದುತ್ತಿದ್ದಾಗಲೇ ಪೊಲೀಸ್‌ ಹುದ್ದೆಗೆ ಸೇರಬೇಕು ಎಂದು ಬಯಸಿದ್ದೆ, ನನ್ನ ಅಮ್ಮ ಸಹಾ ನಾನು ಪೊಲೀಸ್‌ ಆಗಲು ಹಾರೈಸಿದ್ದರು ಎಂದು ಹೇಳಿದ್ದಾರೆ.

ದುರ್ಗಾ ಪೂಜೆಯ ಸಂದರ್ಭದಲ್ಲೆಲ್ಲಾ ನನ್ನಮ್ಮ ನನಗೆ ಆಟಿಕೆಯ ಗನ್‌ ತಂದುಕೊಡುತ್ತಿದ್ದರು. ಜನರಿಗೆ ಒಳ್ಳೆಯ ಸೇವೆ ಮಾಡಲು ಪೊಲೀಸ್‌ ಇಲಾಖೆ ಸೇರು ಎಂದು ಪ್ರೋತ್ಸಾಹಿಸುತ್ತಿದ್ದರು ಎಂದು ಹಿಮಾ ಹೇಳಿದ್ದಾರೆ.

ರಾಜ್ಯದ ಸ್ಥಿತಿಗತಿ ಮತ್ತಷ್ಟು ಉತ್ತಮ ಪಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ, ಆದರೆ ಅದೆಲ್ಲದಕ್ಕಿಂತ ಹೆಚ್ಚಾಗಿ ನಾನು ಕ್ರೀಡೆಯಲ್ಲೇ ಮುಂದುವರೆಯುತ್ತೇನೆ. ಯಾಕೆಂದರೆ ಕ್ರೀಡೆಯಿಂದಲೇ ಇದೆಲ್ಲವೂ ಸಿಕ್ಕಿದೆ ಎಂದು ಹೇಳಿದ್ದಾರೆ.

ಹರ್ಯಾಣದಂತೆ ಅಸ್ಸಾಂ ರಾಜ್ಯದಲ್ಲೂ ಮತ್ತಷ್ಟು ಉತ್ತಮ ಕ್ರೀಡಾಪ್ರತಿಭೆಗಳನ್ನು ಗುರುತಿಸಿ, ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸುವಂತೆ ಮಾಡಲು ಪ್ರಯತ್ನಿಸುವುದಾಗಿ ಹಿಮಾ ದಾಸ್ ಹೇಳಿದ್ದಾರೆ.

Source: Suvarna News