ದೇಶದಲ್ಲಿ ಇಂದು 2,82,970 ಕೊರೊನಾ ಕೇಸ್ಗಳು ದಾಖಲು; ಅತಿ ಹೆಚ್ಚು ಜನ ಮೃತಪಟ್ಟಿದ್ದು ಯಾವ ರಾಜ್ಯದಲ್ಲಿ? ಚೇತರಿಕೆ ರೇಟ್ ಎಷ್ಟು? ಇಲ್ಲಿದೆ ಮಾಹಿತಿ
ದೆಹಲಿ: ದೇಶದಲ್ಲಿ ಇಂದು 2,82,970 ಕೊರೊನಾ ವೈರಸ್ (Corona virus) ಸೋಂಕಿನ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,79,01,241ಕ್ಕೆ ಏರಿಕೆಯಾಗಿದೆ. ಹಾಗೇ, ಭಾರತದಲ್ಲಿ ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 8,961 ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸದ್ಯ ದೇಶದಲ್ಲಿ 18,31,000 ಕೊವಿಡ್ 19 ಸಕ್ರಿಯ ಪ್ರಕರಣಗಳು ಇದ್ದು, ಕಳೆದ 232 ದಿನಗಳಲ್ಲಿಯೇ ಇದು ಅತ್ಯಂತ ಹೆಚ್ಚಿನ ಸಂಖ್ಯೆಯ ಸಕ್ರಿಯ ಪ್ರಕರಣ ಎನ್ನಲಾಗಿದೆ. ಕಳೆದ ಮೇ 31ರಂದು ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 18,95,520 ಇತ್ತು. ಅದಾದ ಬಳಿಕ ಇಳಿಮುಖವಾಗಿತ್ತು. ಹಾಗೇ, 24 ಗಂಟೆಯಲ್ಲಿ 441 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 4,87,202ಕ್ಕೆ ತಲುಪಿದೆ. ಈ 441 ಜನರಲ್ಲಿ ಕೇರಳದ 122 ಮಂದಿ, ಮಹಾರಾಷ್ಟ್ರದಲ್ಲಿ 53 ಸೋಂಕಿತರು ಮತ್ತು ಪಶ್ಚಿಮ ಬಂಗಾಳದಲ್ಲಿ 34 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.
ಇದೀಗ ಕೊರೊನಾ ವೈರಸ್ ಇಷ್ಟು ಪ್ರಮಾಣದಲ್ಲಿ ಹರಡಲು ಒಮಿಕ್ರಾನ್ ಸೋಂಕು ಕಾರಣ. ಹಾಗಂತ ಕೊವಿಡ್ 19 ಪಾಸಿಟಿವ್ ಬಂದಿರುವವರಿಗೆಲ್ಲ ಜಿನೋಮ್ ಸಿಕ್ವೆನ್ಸ್ ಟೆಸ್ಟ್ ಮಾಡಲು ಸಾಧ್ಯವಿಲ್ಲ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಕೊರೊನಾ ಸೋಂಕಿನ ಕೇಸ್ಗಳ ಸಂಖ್ಯೆಯ 4.83ರಷ್ಟು ಸಕ್ರಿಯ ಪ್ರಕರಣವಿದೆ. ಸದ್ಯ ದೇಶದಲ್ಲಿ ಕೊವಿಡ್ 19 ಚೇತರಿಕೆ ರೇಟ್ 93.88ಕ್ಕೆ ಇಳಿದಿರುವುದು ತುಸು ಆತಂಕ ತಂದಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಅಂದಹಾಗೆ ದೈನಂದಿನ ಪಾಸಿಟಿವಿಟಿ ದರ 15.13ರಷ್ಟಿದ್ದು, ವಾರದ ಪಾಸಿಟಿವಿಟಿ ರೇಟ್ 15.53ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೊವಿಡ್ 19 ಸೋಂಕಿನಿಂದ ಸಾಯುತ್ತಿರುವವರ ಪ್ರಮಾಣ 1.29ರಷ್ಟಿದ್ದು, ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 3,55,83,039 ಕ್ಕೆ ಏರಿದೆ. ಇದುವರೆಗೆ ದೇಶದಲ್ಲಿ158.88 ಡೋಸ್ ಲಸಿಕೆ ನೀಡಲಾಗಿದೆ. ಭಾರತದಲ್ಲಿ 2020ರ ಆಗಸ್ಟ್ 7ರಂದು ಕೊವಿಡ್ 19 ಸೋಂಕಿನ ಸಂಖ್ಯೆ 20 ಲಕ್ಷದ ಗಡಿ ದಾಟಿತ್ತು. ಹಾಗೇ, ಆಗಸ್ಟ್ 20ರಂದು 30 ಲಕ್ಷ ಮೀರಿತು. ನೋಡನೋಡುತ್ತಿದ್ದಂತೆ ಭಾರತದಲ್ಲಿ ಕೊವಿಡ್ 19 ಸೋಂಕಿತರ ಸಂಖ್ಯೆ 2021ರ ಮೇ 4ರಂದು 2 ಕೋಟಿ ದಾಟಿ, ಜೂನ್ 23ರಂದು ಮೂರು ಕೋಟಿಯನ್ನೂ ದಾಟಿದೆ.
Source: tv9kannada