ದೇವಸ್ಥಾನಕ್ಕೆ ಕೂಡಿಟ್ಟ ಹಣವನ್ನೂ ಸರ್ಕಾರಿ ಶಾಲೆಗೆ ಕೊಟ್ಟ ಗ್ರಾಮಸ್ಥರು; ಶಿಥಿಲಗೊಂಡಿದ್ದ ಶಾಲೆಗೆ ಮರುಜೀವ
ಗ್ರಾಮದ ಜನ ದೇವಸ್ಥಾನಕ್ಕೆಂದು ಇಟ್ಟಿದ್ದ ಹಣವನ್ನೂ ತಮ್ಮ ಮಕ್ಕಳು ಓದೋ ಶಾಲೆಗೆ ಕೊಟ್ಟಿರುವುದು ವಿಶೇಷ. ಮಕ್ಕಳಿಗೆ ಅಕ್ಷರ ಕಲಿಸೋ ಶಾಲೆ ಕೂಡ ನಮಗೆ ದೇವಸ್ಥಾನ ಇದ್ದಂತೆ ಎಂದು ಶಾಲೆ ಅಭಿವೃದ್ಧಿಗೆ ಹಣ ನೀಡಿದ್ದಾರೆ. ಊರಿನ ಮುಖಂಡರ ಜೊತೆ ಶಿಕ್ಷಕರು ಹೋದ ಕೂಡಲೇ ಯಾರೂ ಕೂಡ ಬರೀಗೈಲಿ ಕಳಿಸಿಲ್ಲ. ಎರಡೇ ಗಂಟೆಗೆ 35 ಸಾವಿರ ಹಣವನ್ನು ಹೊಂದಿಸಿ ಕೊಟ್ಟಿದ್ದಾರೆ.
ಚಿಕ್ಕಮಗಳೂರು: ಟ್ಯಾಕ್ಟ್ರಿ ಶೇಖ್ರಣ್ಣ 1000, ಸುರೇಶ 1000, ಆಂಜನಮ್ಮ 1000., ಶಂಕರಪ್ಪ 500, ರುದ್ರಪ್ಪ 500, ಸತೀಶ 700, ನವೀನ್ 100, ಚೇತನ್ 250 ಇದು ಯಾವುದೋ ದಂಡ ಅಥವಾ ಬಹುಮಾನದ ಹಣವನ್ನು ಘೋಷಿಸುತ್ತಿರೋ ಪಟ್ಟಿಯಲ್ಲ. ಬದಲಾಗಿ ಹಳ್ಳಿಯ ಜನ, ನಮ್ಮೂರ ದೇವಸ್ಥಾನ ಬೇರೆ ಅಲ್ಲ, ನಮ್ಮ ಮಕ್ಕಳು ಓದೋ ಶಾಲೆ ಬೇರೆ ಅಲ್ಲ ಅಂತ ಶಾಲೆಯ ಅಭಿವೃದ್ಧಿಗೆ ನೀಡಿರೋ ದೇಣಿಗೆ ಹಣದ ಸಣ್ಣ ಪಟ್ಟಿ. ಇದು ಶಾಲೆಯನ್ನ ಉಳಿಸಿಕೊಳ್ಳಲು ಸ್ವತಃ ಮುಂದಾದ ಗ್ರಾಮಸ್ಥರು ಪಣ ತೊಟ್ಟ ಬಗೆ.
ಸುಣ್ಣ ಬಣ್ಣದಿಂದ ಕಂಗೊಳಿಸುತ್ತಿರುವ ಈ ಶಾಲೆ ಚಿಕ್ಕಮಗಳೂರು ತಾಲೂಕಿನ ಸಿರಿಬಡಿಗೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದೋ? ನಾಳೆಯೋ? ಎನ್ನುವ ಪರಿಸ್ಥಿತಿಯಲ್ಲಿತ್ತು. ಯಾಕಂದ್ರೆ ಸರ್ಕಾರದಿಂದ ವರ್ಷಕ್ಕೆ ಕೇವಲ 6 ಸಾವಿರ ರೂಪಾಯಿ ಹಣ ಮಾತ್ರ ಬರ್ತಿತ್ತು. ಅದು ಸಹ ಎರಡು ಕಂತಿನಲ್ಲಿ! ಈ ಬಾರಿ ಕೊರೊನಾ ದೆಸೆಯಿಂದ ಆ ಹಣವೂ ಬಂದಿಲ್ಲ. ಹಾಗಂತ ಹಣವಿಲ್ಲ ಎಂದು ಶಾಲೆಯನ್ನು ನಿರ್ಲಕ್ಷ್ಯ ಮಾಡದ ಗ್ರಾಮಸ್ಥರು, ಹೀಗೆ ಬಿಟ್ರೆ ಶಾಲೆ ಬಿದ್ದೇ ಹೋಗುತ್ತೆ ಎಂದು ತಾವೇ ಮುಂದಾಗಿ ತಮ್ಮೂರ ಶಾಲೆಗೆ ಹೊಸ ರೂಪ ಕೊಟ್ಟಿದ್ದಾರೆ.
ಕೆಳ ಸಿರಿಬಡಿಗೆ ಹಾಗೂ ಮೇಲಿನ ಸಿರಿಬಡಿಗೆ ಗ್ರಾಮದಲ್ಲಿ ಸುಮಾರು 150 ಮನೆಗಳಿವೆ. ಎಲ್ಲರೂ ಸೇರಿ 100 ರಿಂದ 1000 ದವರೆಗೂ ಅವರ ಕೈಲಾದಷ್ಟು ಹಣ ಹಾಕಿ ₹35 ಸಾವಿರ ಹಣವನ್ನ ಶಾಲಾ ಶಿಕ್ಷಕರಿಗೆ ಕೊಟ್ಟಿದ್ದಾರೆ. ಆ ಹಣಕ್ಕೆ ಶಿಕ್ಷಕರೇ ಮತ್ತಷ್ಟು ಸೇರಿಸಿ ಆಗಲೋ, ಈಗಲೋ ಅಂತಿದ್ದ ಶಾಲೆಗೆ ಮರುಜೀವ ಕೊಟ್ಟಿದ್ದಾರೆ. ಮೇಲ್ಛಾವಣಿ ದುರಸ್ಥಿ ಮಾಡಿಸಿದ್ದಾರೆ. ಮಕ್ಕಳು ಕೂರುವುದಕ್ಕೆ ಕುರ್ಚಿ ವ್ಯವಸ್ಥೆ ಮಾಡಿದ್ದಾರೆ. 1 ರಿಂದ 7ನೇ ತರಗತಿವರೆಗೆ 48 ಮಕ್ಕಳು ಓದೋ ಎಂಟು ಕೊಠಡಿಗಳಿಗೂ ಸುಣ್ಣ ಬಣ್ಣ ಹೊಡೆಸಿ ಸಿಂಗರಿಸಿದ್ದಾರೆ. ಶಾಲೆಯಲ್ಲಿನ ಉತ್ತಮ ಶಿಕ್ಷಣ ವ್ಯವಸ್ಥೆ ಕಂಡು ಖಾಸಗಿ ಶಾಲೆಗೆ ಹೋಗ್ತಿದ್ದ ಸುಮಾರು 20 ಮಕ್ಕಳು ಇದೀಗ ಈ ಶಾಲೆಗೆ ಸೇರಿದ್ದಾರೆ.
ದೇವಸ್ಥಾನಕ್ಕೆ ಕೂಡಿಟ್ಟ ಹಣವನ್ನೂ ಶಾಲೆಗೆ ಕೊಟ್ಟರು
ಗ್ರಾಮದ ಜನ ದೇವಸ್ಥಾನಕ್ಕೆಂದು ಇಟ್ಟಿದ್ದ ಹಣವನ್ನೂ ತಮ್ಮ ಮಕ್ಕಳು ಓದೋ ಶಾಲೆಗೆ ಕೊಟ್ಟಿರುವುದು ವಿಶೇಷ. ಮಕ್ಕಳಿಗೆ ಅಕ್ಷರ ಕಲಿಸೋ ಶಾಲೆ ಕೂಡ ನಮಗೆ ದೇವಸ್ಥಾನ ಇದ್ದಂತೆ ಎಂದು ಶಾಲೆ ಅಭಿವೃದ್ಧಿಗೆ ಹಣ ನೀಡಿದ್ದಾರೆ. ಊರಿನ ಮುಖಂಡರ ಜೊತೆ ಶಿಕ್ಷಕರು ಹೋದ ಕೂಡಲೇ ಯಾರೂ ಕೂಡ ಬರೀಗೈಲಿ ಕಳಿಸಿಲ್ಲ. ಎರಡೇ ಗಂಟೆಗೆ 35 ಸಾವಿರ ಹಣವನ್ನು ಹೊಂದಿಸಿ ಕೊಟ್ಟಿದ್ದಾರೆ. ಇದರಿಂದ ಇಂದು ಶಾಲೆ ನಳನಳಿಸುತ್ತಿದೆ. ಊರಿನ ಜನರ ಸಹಕಾರವನ್ನು ಕಂಡು ಬೆರಗಾದ ಶಿಕ್ಷಕರು ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸದ್ಯ ಊರಿನವರ ಹೃದಯ ಶ್ರೀಮಂತಿಕೆಯಿಂದ ಶಿಥಿಲಗೊಂಡಿದ್ದ ಶಾಲೆ ಇದೀಗ ಮರುಜೀವ ಪಡೆದಿದೆ. ಒಟ್ಟಾರೆ, ರಾಜ್ಯದ ಪ್ರತಿಯೊಂದು ಹಳ್ಳಿಯ ಜನರೂ ಸರ್ಕಾರದ ದಾರಿಗೆ ಕಾಯುತ್ತಾ ಕೂರದೇ ತಮ್ಮೂರ ಶಾಲೆಗಳನ್ನು ಇದೇ ರೀತಿಯಲ್ಲಿ ಉಳಿಸಿಕೊಳ್ಳಲು ಮುಂದಾದ್ರೆ ಯಾವ ಸರ್ಕಾರಿ ಶಾಲೆಗಳೂ ಬಾಗಿಲು ಹಾಕುವ ಪರಿಸ್ಥಿತಿಗೆ ತಲುಪುವುದಿಲ್ಲವೇನು. ಈ ನಿಟ್ಟಿನಲ್ಲಿ ಇಡೀ ರಾಜ್ಯಕ್ಕೆ ಸಿರಿಬಡಿಗೆ ಗ್ರಾಮಸ್ಥರು ಮಾದರಿಯಾಗಿದ್ದಾರೆ ಎಂದರೆ ಅತಿಶಯೋಕ್ತಿ ಅಲ್ಲ.
Source:TV9Kannada