‘ತೋತಾಪುರಿ’ ಹಿಡಿದು ನಗಿಸಲು ಬಂದ ಜಗ್ಗೇಶ್​; ‘ನೀರ್​ ದೋಸೆ’ ಜೋಡಿಯ ನಗೆ ಹಬ್ಬ

Aug 27, 2021

ಇತ್ತೀಚೆಗೆ ನಟ ಜಗ್ಗೇಶ್​ (Jaggesh) ಅವರು ಕೆಲವು ವಿವಾದಗಳ ಕಾರಣದಿಂದ ಅಸಮಾಧಾನಗೊಂಡಿದ್ದರು. ಆದರೆ ಈಗ ಅದನ್ನೆಲ್ಲ ಬದಿಗಿಟ್ಟು ಪ್ರೇಕ್ಷಕರನ್ನು ಮನಸಾರೆ ರಂಜಿಸಲು ಬಂದಿದ್ದಾರೆ. ಅವರು ನಟಿಸಿರುವ ‘ತೋತಾಪುರಿ’ (Thothapuri) ಸಿನಿಮಾದ ಟೀಸರ್​ ಪ್ರೋಮೋ ಬಿಡುಗಡೆ ಆಗಿದ್ದು, ಆ ಮೂಲಕ ಅಭಿಮಾನಿಗಳಿಗೆ ಕಾಮಿಡಿ ಕಚಗುಳಿ ಇಡುತ್ತಿದ್ದಾರೆ. ಈ ಸಿನಿಮಾ ಪ್ರಾರಂಭದಿಂದಲೂ ಸದ್ದು ಮಾಡುತ್ತಿದೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಮೇಲೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಯನ್ನು ಹೆಚ್ಚಿಸಲು ಶೀಘ್ರದಲ್ಲೇ ಟೀಸರ್​ ಬಿಡುಗಡೆ ಆಗಲಿದೆ.

ಈ ಪ್ರೋಮೋನಲ್ಲಿ ಜಗ್ಗೇಶ್ ಹಾಗೂ ವಿಜಯ್​ ಪ್ರಸಾದ್ ಮಾತಿನಲ್ಲೇ ಕಚಗುಳಿ ಇಟ್ಟಿದ್ದಾರೆ. ವಿಶೇಷವಾಗಿ ಸಿನಿಮಾದ ಪ್ರಮೋಶನ್ ಮಾಡುವ ಉದ್ದೇಶದಿಂದ ಈ ಟೀಸರ್‌ ಪ್ರೋಮೋವನ್ನು ಶೂಟ್ ಮಾಡಿ ಸುರೇಶ್ ಆರ್ಟ್ಸ್ ಯೂಟ್ಯೂಬ್ ಚಾನಲ್ ಮೂಲಕ ರಿಲೀಸ್ ಮಾಡಿದೆ. ಜಗ್ಗೇಶ್​ ಅಭಿಮಾನಿಗಳಿಗೆ ಈ ಪ್ರಯತ್ನ ಇಷ್ಟ ಆಗುತ್ತಿದೆ. ಇದನ್ನು ಜಗ್ಗೇಶ್​ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ನೀರ್‌ದೋಸೆ’ ಸಿನಿಮಾ ಮೂಲಯ ಯಶಸ್ಸು ಕಂಡ ನಿರ್ದೇಶಕ ವಿಜಯ್​ ಪ್ರಸಾದ್ ಹಾಗೂ ಜಗ್ಗೇಶ್ ‘ತೋತಾಪುರಿ’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಈ ಚಿತ್ರದಲ್ಲಿ ಜಗ್ಗೇಶ್ ಹಾಗೂ ಇತರ ಕಲಾವಿದರ ಗೆಟಪ್ ತುಂಬಾ ವಿಭಿನ್ನವಾಗಿದೆ. 2 ಪಾರ್ಟ್​ಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದ್ದು, ಏಕಕಾಲಕ್ಕೆ ಎರಡೂ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ.

ಸದ್ಯ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಜಗ್ಗೇಶ್ ಈವರೆಗೂ ನಟಿಸಿರುವ ಚಿತ್ರಗಳಲ್ಲಿ ಇದು ಬಿಗ್ ಬಜೆಟ್ ಸಿನಿಮಾ ಎನ್ನಲಾಗಿದೆ. ಭಾಗ-1 ಭಾಗ-2ರಲ್ಲಿ ಅವರು ಕಾಣಿಸಿಕೊಂಡಿದ್ದು ಕೂಡ ಇದೇ ಮೊದಲು. ಜಗ್ಗೇಶ್ ಸೇರಿದಂತೆ ಚಿತ್ರದಲ್ಲಿ 80ಕ್ಕೂ ಅಧಿಕ ಕಲಾವಿದರು ನಟಿಸಿದ್ದಾರೆ. ಅದಿತಿ ಪ್ರಭುದೇವ, ಡಾಲಿ ಧನಂಜಯ, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.

ತಾಂತ್ರಿಕತೆಯ ವಿಚಾರದಲ್ಲೂ ಈ ಚಿತ್ರ ಸದ್ದು ಮಾಡುತ್ತಿದೆ. ಹಿಟ್ ಸಿನಿಮಾಗಳನ್ನು ನೀಡಿರುವ ‘ಸುರೇಶ್ ಆರ್ಟ್ಸ್‌’ ಬ್ಯಾನರ್‌ನ ಕೆ.ಎ. ಸುರೇಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜಗ್ಗೇಶ್ ನಟನೆಯ ಎದ್ದೇಳು ಮಂಜುನಾಥ, ನೀರ್‌ ದೋಸೆ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದ ಅನೂಪ್ ಸೀಳಿನ್ ‘ತೋತಾಪುರಿ’ಗೂ ಸಂಗೀತ ನಿರ್ದೇಶನ ಮಾಡಿದ್ದು, ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.

ನಿರಂಜನ್ ಬಾಬು ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ. ಮೈಸೂರು, ಶ್ರೀರಂಗಪಟ್ಟಣ, ಮಡಿಕೇರಿ, ಕೇರಳ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರಮಂದಿರಗಳಿಗೆ ಶೇ.100 ಆಸನ ಭರ್ತಿಗೆ ಅವಕಾಶ ಸಿಕ್ಕ ಕೂಡಲೇ ಸಿನಿಮಾ ಬಿಡುಗಡೆ ಮಾಡಲು ತಂಡ ಸಜ್ಜಾಗಿದೆ. ಅದಕ್ಕಾಗಿ ಸರ್ಕಾರದ ಅನುಮತಿಗಾಗಿ ‘ತೋತಾಪುರಿ’ ತಂಡ ಕಾಯುತ್ತಿದೆ.

Source:tv9 Kannada