ತೆಲಂಗಾಣದಲ್ಲಿ ವಿದ್ಯುತ್ ಸೇವೆ ಕಡಿತಗೊಳಿಸಲು ಚೀನಾ ಹ್ಯಾಕರ್​ಗಳ ಪ್ರಯತ್ನ?

Mar 3, 2021

ತೆಲಂಗಾಣ ರಾಜ್ಯ ಲೋಡ್ ಡಿಸ್ಪ್ಯಾಚ್ ಸೆಂಟರ್ (TSLDC) ಮೇಲೆ ಚೀನಾದ ಹ್ಯಾಕರ್​ಗಳು ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಸೈಬರ್ ಕ್ರಿಮಿನಲ್​ಗಳ ಈ ದಾಳಿಗೆ ರಾಜ್ಯ ಸರ್ಕಾರದ ಏಜೆನ್ಸಿಗಳು ಯಶಸ್ವಿಯಾಗಿ ತಡೆಯೊಡ್ಡಿದೆ.

ಹೈದರಾಬಾದ್: ಮುಂಬೈನಲ್ಲಿ ಈ ಹಿಂದೆ ಘಟಿಸಿದ್ದಂತ ಬೃಹತ್ ಪ್ರಮಾಣದಲ್ಲಿ ವಿದ್ಯುತ್ ವ್ಯತ್ಯಯವಾದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಭಾರತದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In), ಚೀನಾ ಹ್ಯಾಕರ್​ಗಳು TS Transco ಮತ್ತು TS Gencoಗೆ ಗುರಿ ಇಟ್ಟು ಸಮಸ್ಯೆ ಉಂಟುಮಾಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೆಂಟ್ರಲ್ ಎಲೆಕ್ಟ್ರಿಸಿಟಿ ಅಥಾರಿಟಿ, ತೆಲಂಗಾಣ ಸರ್ಕಾರಕ್ಕೆ ಎಚ್ಚರಿಕೆಯಿಂದ ಇರಲು ಸೂಚಿಸಿದೆ.

ಟೈಮ್ಸ್ ಆಫ್ ಇಂಡಿಯಾ ಸುದ್ದಿಸಂಸ್ಥೆಯ ವರದಿ ಪ್ರಕಾರ, ತೆಲಂಗಾಣ ರಾಜ್ಯ ಲೋಡ್ ಡಿಸ್ಪ್ಯಾಚ್ ಸೆಂಟರ್ (TSLDC) ಮೇಲೆ ಚೀನಾದ ಹ್ಯಾಕರ್​ಗಳು ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಸೈಬರ್ ಕ್ರಿಮಿನಲ್​ಗಳ ಈ ದಾಳಿಗೆ ರಾಜ್ಯ ಸರ್ಕಾರದ ಏಜೆನ್ಸಿಗಳು ಯಶಸ್ವಿಯಾಗಿ ತಡೆಯೊಡ್ಡಿದೆ.

ಚೀನಾ ಹ್ಯಾಕರ್​ಗಳ ದುಷ್ಕೃತ್ಯದ ಬಗ್ಗೆ ಅಧಿಕೃತ ಮತ್ತು ಸುರಕ್ಷಿತ ಮೂಲಗಳಿಂದ ಮಾಹಿತಿ ಪಡೆದು TSLDC, TS Transco ಮತ್ತು TS Gencoಗೆ ಸೈಬರ್ ಕ್ರೈಮ್ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿವೆ. ತೆಲಂಗಾಣ Transco ಮತ್ತು Genco ನಿರ್ದೇಶಕ ಡಿ. ಪ್ರಭಾಕರ್ ರಾವ್ ಸೈಬರ್ ದಾಳಿಯ ಬಗ್ಗೆ ಸೆಂಟ್ರಲ್ ಏಜೆನ್ಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಿರುವ ವಿಚಾರವನ್ನು ಖಚಿತಪಡಿಸಿದ್ದಾರೆ. ಸಬ್​ಸ್ಟೇಷನ್​ಗಳಿಂದ ಮಾಲ್​ವೇರ್​ಗಳನ್ನು ತೆಗೆದುಹಾಕಲಾಗಿದೆ. ಸೈಬರ್ ಕ್ರೈಮ್ ದಾಳಿ ಅಥವಾ ಸಮಸ್ಯೆಗಳನ್ನು ಎದುರಿಸಲು ಆ್ಯಂಟಿವೈರಸ್​ಗಳನ್ನು ಬಲಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ತೆಲಂಗಾಣ ರಾಜ್ಯ ದಕ್ಷಿಣ ವಿದ್ಯುತ್ ಹಂಚಿಕೆ ಕಂಪೆನಿ ನಿಯಮಿತ (TSSPDCL) ಈ ಹಿಂದೆ 2019ರಲ್ಲಿ ಸೈಬರ್ ದಾಳಿಗೆ ಒಳಗಾಗಿತ್ತು. ಇದರಿಂದ ಸಂಸ್ಥೆಯ ಸೇವೆಗಳ ಮೇಲೆ ಮೂರು ನಾಲ್ಕು ದಿನಗಳ ಕಾಲ ದುಷ್ಪರಿಣಾಮ ಉಂಟಾಗಿತ್ತು. ಅಕ್ಟೋಬರ್ 12, 2020ರಲ್ಲಿ ಮುಂಬೈನಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು. ಚೀನಾದ ಸೈಬರ್ ದಾಳಿಯಿಂದಾಗಿ ಭಾರತದ ಬ್ಯುಸಿನೆಸ್ ಹಬ್ ಮುಂಬೈನಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿತ್ತು ಎಂದು ಬಳಿಕ ವರದಿಗಳು ಮಾಹಿತಿ ನೀಡಿದ್ದವು. ಆದರೆ, ಮುಂಬೈನ ವಿದ್ಯುತ್ ವ್ಯತ್ಯಯ ಮಾನವನ ದೋಷದಿಂದ ಉಂಟಾಗಿತ್ತೇ ವಿನಃ ಅದರಲ್ಲಿ ಚೀನಾ ಹ್ಯಾಕರ್​ಗಳ ಕೈವಾಡ ಏನೂ ಇರಲಿಲ್ಲ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದರು.

Source: TV9Kannada