ತುರ್ತು ಪರಿಸ್ಥಿತಿಗೆ 46 ವರ್ಷ: ಕಪ್ಪುದಿನವೆಂದು ಟ್ವೀಟ್ ಮಾಡಿದ ಮೋದಿ!

Jun 25, 2021

ನವದೆಹಲಿ(ಜೂ.25): 1975ರ ಜೂನ್ 25ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಇದು ಭಾರತದ ಇತಿಹಾದ ಅತ್ಯಂತ ಕಳಂಕಿತ ರಾಜಕೀಯ ಕ್ರಮ ಎನ್ನಲಾಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಾ ಈ ವಿಚಾರವಾಗಿ ಟ್ವೀಟ್ ಒಂದನ್ನು ಮಾಡಿದ್ದು, ಇಂದಿರಾ ಗಾಂಧಿ ಎಮರ್ಜೆನ್ಸಿ ಹೇರಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ತುಳಿದು ಹಾಕಿದ್ದರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕಪ್ಪು ದಿನವನ್ನು ಯಾವತ್ತಿಗೂ ಮರೆಯಲಾಗುವುದಿಲ್ಲ ಎಂದೂ ಹೇಳಿದ್ದಾರೆ.

ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು, ಇದು 1977ವರೆಗೆ ಜಾರಿಯಲ್ಲಿತ್ತು. ದೇಶಾದ್ಯಂತ ಇಂದಿರಾ ಗಾಂಧಿಯವರ ಈ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು ಎಂಬುವುದು ಉಲ್ಲೇಖನೀಯ. ಯಾವ ರೀತಿ ಕಾಂಗ್ರೆಸ್ ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳನ್ನು ತುಳಿದು ಹಾಕಿತು? ಎಂಬುವುದು ಎಲ್ಲರಿಗೂ ತಿಳಿದಿದೆ. ಅಂದು ತುರ್ತು ಪರಿಸ್ಥಿತಿಯನ್ನು ವಿರೋಧಿಸಿ, ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದ ಎಲ್ಲರನ್ನೂ ನೆನಪಿಸಿಕೊಳ್ಳುತ್ತೇನೆ ಎಂದೂ ಮೋದಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

1975ರ ಜೂನ್ 25ರಂದು ಮಧ್ಯರಾತ್ರಿ ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿದ್ದರು. ಇದು ಭಾರತೀಯ ಇತಿಹಾಸದ ಕರಾಳ ಅಧ್ಯಯ ಎಂದೂ ಕರೆಯಲಾಗುತ್ತದೆ. ಈ ಎಮರ್ಜೆನ್ಸಿ 1977ರ ಮಾರ್ಚ್ 21ರವರೆಗೆ ಮುಂದುವರೆದಿತ್ತು. ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ, ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರ ಶಿಫಾರಸ್ಸಿನ ಮೇರೆಗೆ ದೇಶದ ಸಂವಿಧಾನದ ಆರ್ಟಿಕಲ್ 352 ರಡಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರು.

ಸ್ವತಂತ್ರ ಭಾರತದಲ್ಲಿ ಈ ಸಮಯವನ್ನು ಅತ್ಯಂತ ವಿವಾದಾತ್ಮಕ ಸಂದರ್ಭ ಎನ್ನಲಾಗುತ್ತದೆ. ಈ ಸಂfದರ್ಭದಲ್ಲಿ ಚುನಾವಣೆಗಳೂ ಸ್ಥಗಿತಗೊಂಡಿದ್ದವು. ಜೂನ್ 25ರ ಮಧ್ಯರಾತ್ರಿ ಎಮರ್ಜೆನ್ಸಿ ಘೋಷಣೆಯಾಗಿ, ಮರುದಿನ ಬೆಳಗ್ಗೆ ಅಂದರೆ ಜೂನ್ 26ರಂದು ಇಡೀ ದೇಶ ರೇಡಿಯೋ ಮೂಲಕ ಇಂದಿರಾ ಗಾಂಧಿ ಧ್ವನಿಯಲ್ಲಿ ತುರ್ತು ಪರಿಸ್ಥಿತಿ ಹೇರಲಾಘಿರುವ ಘೋಷಣೆ ಆಲಿಸಿತು. ಈ ತುರ್ತು ಪರಿಸ್ಥಿತಿ ಹೇರಿಕೆ ಹಿಂದೆ ಅನೇಕ ಕಾರಣಗಳಿದ್ದವು. ಇದರಲ್ಲಿ ಎಲ್ಲಕ್ಕಿಂತ ಪ್ರಮುಖವೆಂದರೆ 1975ರ ಜೂನ್ 12ರಂದು ಅಲಹಾಬಾದ್‌ ಹೈಕೋರ್ಟ್ ಇಂದಿರಾ ಗಾಂಧಿ ವಿರುದ್ಧ ನೀಡಿದ್ದ ತೀರ್ಪು ಆಗಿತ್ತು.

 

Source: Suvarna News Kannada