ಟ್ವೀಟ್​ ಮೂಲಕ ಆಸ್ಟ್ರೇಲಿಯನ್ನರ ಕೆನ್ನೆಗೆ ನಯವಾಗಿಯೇ ಬಾರಿಸಿದ ಆನಂದ್ ಮಹೀಂದ್ರಾ! ಏನದು?

Jan 21, 2021

ಇವರು ತಮ್ಮ ಮಾತುಗಳನ್ನು ಹೇಗೆ ತಿನ್ನಲು ಬಯಸುತ್ತಾರೆ? ಬೇಯಿಸಿದ, ಹುರಿದ ದೋಸಾ ಅಥವಾ ಚಪಾತಿಯಲ್ಲಿ ಸುರುಳಿ ಸುತ್ತುಕೊಂಡು ತಿನ್ನುತ್ತಾರಾ ಎಂದು ತಮಾಷೆಯಾಗಿ ಕೇಳಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಐತಿಹಾಸಿಕ ವಿಜಯದ ನಂತರ ಪ್ರಧಾನಿ ಮೋದಿ ಸೇರಿದಂತೆ ಹಲವಾರು ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಆದರೆ ಇವುಗಳ ನಡುವೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಆನಂದ್​ ಮಹೀಂದ್ರಾ ಭಾರತದ ದೊಡ್ಡ ಉದ್ಯಮಿ. ಆದರೆ ತಮ್ಮ ಸರಳತೆಯಿಂದ ಜಗದ ಗಮನ ಸೆಳೆದವರು. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಮಹೀಂದ್ರಾ, ಸಾಮಾನ್ಯ ಜನರ ಕಷ್ಟಗಳಿಗೆ ಬಹುಬೇಗನೆ ಸ್ಪಂದಿಸುವ ವ್ಯಕ್ತಿಯಾಗಿದ್ದಾರೆ.

ಮಾಜಿ ಕ್ರಿಕೆಟಿಗರು ಟೀಂ ಇಂಡಿಯಾವನ್ನು ತೆಗಳಲು ಶುರುಮಾಡಿದ್ದರು..
ಆಸಿಸ್​ ಪ್ರವಾಸದಲ್ಲಿದ್ದ ಟೀಂ ಇಂಡಿಯಾ ಆಟಗಾರರು ಗಾಯದ ಸಮಸ್ಯೆಯಿಂದಾಗಿ ಒಬ್ಬೊಬ್ಬರಾಗಿಯೇ ತಂಡದಿಂದ ಹೊರ ನಡೆಯಲು ಪ್ರಾರಂಭಿಸಿದ್ದರು. ಅಲ್ಲದೆ ನಾಯಕ ಕೊಹ್ಲಿ ಸಹ ಪಿತೃತ್ವದ ರಜೆ ಪಡೆದು ಭಾರತಕ್ಕೆ ವಾಪಾಸ್ಸಾಗಿದ್ದರು. ಇದನ್ನು ಗಮನಿಸಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರು ಟೀಂ ಇಂಡಿಯಾವನ್ನು ತೆಗಳಲು ಶುರು ಮಾಡಿದ್ದರು. ಅವರ ವ್ಯಂಗ್ಯೋಕ್ತಿಗಳು ತೀರಾ ತಳಮಟ್ಟ ತಲುಪಿದ್ದವು. ಹೇಳಬೇಕು ಅಂದ್ರೆ ಕೊಹ್ಲಿ ಇಲ್ಲದ ಟೀಂ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಹೀನಾಯವಾಗಿ ಸೋಲಲಿದೆ ಎಂದೇ ಬಿಂಬಿಸಿದ್ದರು.

ಅದರಲ್ಲೂ ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಮೈಕೆಲ್ ಕ್ಲಾರ್ಕ್, ರಿಕಿ ಪಾಂಟಿಂಗ್, ಮಾರ್ಕ್ ವಾ, ಆಸ್ಟ್ರೇಲಿಯಾದ ಮಾಜಿ ಕೀಪರ್ ಬ್ರಾಡ್ ಹ್ಯಾಡಿನ್ ಮತ್ತು ಮಾಜಿ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಮೈಕೆಲ್ ವಾನ್ ಟೀಂ ಇಂಡಿಯಾವನ್ನು ಇನ್ನಿಲ್ಲದಂತೆ ತೆಗಳಿದರು.

ಅದರಲ್ಲೂ ಆಸಿಸ್​ ನಾಯಕ ಮೈಕೆಲ್ ಕ್ಲಾರ್ಕ್, ಮುಂದಿನ 2 ಟೆಸ್ಟ್​ಗಳಲ್ಲಿ ವಿರಾಟ್​ ಕೊಹ್ಲಿ ಇಲ್ಲದ ಟೀಂ ಇಂಡಿಯಾದ ಬ್ಯಾಟಿಂಗ್​ ವಿಭಾಗವನ್ನು ಊಹೆ ಕೂಡ ಮಾಡಲಾಗದು. ಟೀಂ ಇಂಡಿಯಾ ದೊಡ್ಡ ತೊಂದರೆಯಲ್ಲಿ ಸಿಕ್ಕಿಕೊಂಡಿದೆ ಎಂದು ಟ್ವೀಟ್​ ಮಾಡಿದ್ದರು.

ಟೀಂ ಇಂಡಿಯಾವನ್ನು ವೈಟ್​ವಾಶ್​ ಮಾಡಲು ಒಳ್ಳೆಯ ಅವಕಾಶ ಸಿಕ್ಕಿದೆ ಎಂದೂ ಹೇಳಿದ್ದರು..
ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಮಾತಾನಾಡಿದ ಆಸಿಸ್​ ಮಾಜಿ ನಾಯಕ ರಿಕಿ ಪಾಂಟಿಂಗ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾವನ್ನು ವೈಟ್​ವಾಶ್​ ಮಾಡಲು ಒಳ್ಳೆಯ ಅವಕಾಶ ಸಿಕ್ಕಿದೆ. ಹೀಗಾಗಿ ಮೊದಲ ಟೆಸ್ಟ್​ನ ಹೀನಾಯ ಸೋಲಿನಿಂದ ಟೀಂ ಇಂಡಿಯಾವನ್ನು ಮೇಲೆತ್ತುವವರು ಯಾರೂ ಇಲ್ಲ ಎಂದು ಜರಿದಿದ್ದರು.

ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾವನ್ನು ಮೂರು ವಿಕೆಟ್‌ಗಳಿಂದ ಸೋಲಿಸುತ್ತಿದ್ದಂತೆ, ಟೀಂ ಇಂಡಿಯಾವನ್ನು ಟೀಕಿಸಿದವರ ಕೆನ್ನೆಗೆ ನಯವಾಗಿಯೇ ಹೊಡೆಯುವ ಕೆಲಸವನ್ನು ಆನಂದ್ ಮಹೀಂದ್ರಾ ತಮ್ಮ ಟ್ವೀಟ್​ ಮೂಲಕ ಮಾಡಿದ್ದಾರೆ.

ಆನಂದ್​ ಮಹೀಂದ್ರಾ ಟ್ವೀಟ್​ಗೆ ಭಾರಿ ಮೆಚ್ಚುಗೆ..
ಟ್ವಿಟರ್‌ನಲ್ಲಿ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಮಾಜಿ ಕ್ರಿಕೆಟ್ ಆಟಗಾರರು ನೀಡಿದ ಹೇಳಿಕೆಗಳನ್ನು ಹಂಚಿಕೊಂಡಿರುವ ಮಹೀಂದ್ರಾ, ಇವರು ತಮ್ಮ ಮಾತುಗಳನ್ನು ಹೇಗೆ ತಿನ್ನಲು ಬಯಸುತ್ತಾರೆ? ಬೇಯಿಸಿದ, ಹುರಿದ ದೋಸಾ ಅಥವಾ ಚಪಾತಿಯಲ್ಲಿ ಸುರುಳಿ ಸುತ್ತುಕೊಂಡು ತಿನ್ನುತ್ತಾರಾ ಎಂದು ತಮಾಷೆಯಾಗಿ ಕೇಳಿದ್ದಾರೆ. ಮಹೀಂದ್ರಾ ಅವರ ಈ ಟ್ವೀಟ್​ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

Source: TV9Kannada