ಟೀಂ ಇಂಡಿಯಾ ದಿಗ್ವಿಜಯ; ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಿದ ಭಾರತ
ಅಹಮದಾಬಾದ್(ಮಾ.06): ಭಾರತೀಯ ಸ್ಪಿನ್ನರ್‌ಗಳ ಕೈಚಳಕಕ್ಕೆ ಇಂಗ್ಲೆಂಡ್ ಮತ್ತೊಮ್ಮೆ ತತ್ತರಿಸಿಹೋಗಿದೆ. ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 135 ರನ್‌ಗಳಿಗೆ ಆಲೌಟ್ ಆಗುವ ಮೂಲಕ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನಿಂಗ್ಸ್ ಹಾಗೂ 25 ರನ್‌ಗಳ ಜಯ ಸಾಧಿಸಿದೆ. ಇದರೊಂದಿಗೆ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ವಿರಾಟ್ ಕೊಹ್ಲಿ ಪಡೆ 3-1 ಅಂತರದಲ್ಲಿ ಜಯಭೇರಿ ಬಾರಿಸುವ ಮೂಲಕ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆಗಿಟ್ಟಿಸಿಕೊಂಡಿದೆ.
ಇದೀಗ ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಜೂನ್ 18ರಿಂದ 22ರವರೆಗೆ ನಡೆಯಲಿರುವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರಶಸ್ತಿಗಾಗಿ ನ್ಯೂಜಿಲೆಂಡ್ ಜತೆ ಕಾದಾಡಲಿದೆ.
ಹೌದು, 160 ರನ್‌ಗಳ ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಭಾರತೀಯ ಸ್ಪಿನ್ನರ್‌ಗಳ ಮುಂದೆ ರನ್ ಗಳಿಸಲು ತಡಬಡಾಯಿಸಿತು. ಇಂಗ್ಲೆಂಡ್ ಪರ ಜೋ ರೂಟ್(30) ಹಾಗೂ ಡೇನಿಯಲ್ ಲಾರೆನ್ಸ್ ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು 20 ರನ್ ಗಳಿಸಲು ಸಾಧ್ಯವಾಗಲಿಲ್ಲ. ಟೂರ್ನಿಯುದ್ಧಕ್ಕೂ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಇನ್ನಿಲ್ಲದಂತೆ ಕಾಡಿದ ಅಕ್ಷರ್ ಪಟೇಲ್ ನಾಲ್ಕನೇ ಬಾರಿಗೆ ಈ ಸರಣಿಯಲ್ಲಿ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಅಕ್ಷರ್ ಪಟೇಲ್‌ಗೆ ಉತ್ತಮ ಸಾಥ್ ನೀಡಿದ ರವಿಚಂದ್ರನ್ ಅಶ್ವಿನ್ ಕೂಡಾ 5 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ತಂಡದ ವಿರುದ್ದ ದಿಗ್ವಿಜಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ರವಿಚಂದ್ರನ್ ಅಶ್ವಿನ್ 30ನೇ ಬಾರಿಗೆ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಜೇಮ್ಸ್ ಆಂಡರ್‌ಸನ್ ಅವರ ಹೆಸರಿನಲ್ಲಿದ್ದ 5+ ವಿಕೆಟ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಆಂಡರ್‌ಸನ್ 160 ಟೆಸ್ಟ್ ಪಂದ್ಯಗಳನ್ನಾಡಿ 30 ಬಾರಿ 5+ ವಿಕೆಟ್ ಕಬಳಿಸಿದರೆ, ಅಶ್ವಿನ್ ಕೇವಲ 78 ಪಂದ್ಯಗಳನ್ನಾಡಿ 30 ಬಾರಿ 5+ ವಿಕೆಟ್ ಕಬಳಿಸಿದ್ದಾರೆ.
ಟೆಸ್ಟ್ ಸರಣಿ ದಿಗ್ವಿಜಯ: ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡದ ಮೊದಲ ಟೆಸ್ಟ್ ಪಂದ್ಯವನ್ನು ಪ್ರವಾಸಿ ಇಂಗ್ಲೆಂಡ್ ತಂಡ 227 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಆದರೆ ಚೆನ್ನೈನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಭಾರತ 317 ರನ್‌ಗಳ ಭಾರೀ ಅಂತರದ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿತ್ತು. ಇನ್ನು ಅಹಮದಾಬಾದ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 2-1 ಅಂತರದ ಮುನ್ನಡೆ ಸಾಧಿಸಿತ್ತು.
Source: TV9Kannada