ಚಾಮುಂಡಿಬೆಟ್ಟವನ್ನ ಕಾಂಕ್ರೀಟ್ ಕಾಡು ಮಾಡುವ ಯೋಜನೆ ವಿರುದ್ಧ ಸಾಹಿತಿ ಎಸ್.ಎಲ್. ಬೈರಪ್ಪ ಸಾತ್ವಿಕ ಸಿಟ್ಟು, ಪ್ರಧಾನಿ ಮೋದಿಗೆ ಪತ್ರ

Nov 23, 2021

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟ ಉಳಿಸಿ ಅಂತ ಸಾಹಿತಿ ಎಸ್.ಎಲ್. ಬೈರಪ್ಪ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಸರ್ಕಾರ ಕೈಗೊಂಡಿರುವ ಯೋಜನೆಯನ್ನು ಎಸ್.ಎಲ್. ಬೈರಪ್ಪ ವಿರೋಧಿಸಿದ್ದಾರೆ.

ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಿಂದ ಚಾಮುಂಡಿಬೆಟ್ಟಕ್ಕೆ ತೊಂದರೆಯಾಗುತ್ತದೆ. ಚಾಮುಂಡಿಬೆಟ್ಟವನ್ನ ಕಾಂಕ್ರೀಟ್ ಕಾಡು ಮಾಡುವ ಯೋಜನೆ ಇದಾಗಿದೆ. ಈ ಯೋಜನೆಯನ್ನ ಅನುಷ್ಠಾನಗೊಳಿಸಬಾರದು. ಜೊತೆಗೆ ಚಾಮುಂಡಿಬೆಟ್ಟಕ್ಕೆ ಹೋಗುವಂತ ವಾಹನಗಳಿಗೆ ನಿರ್ಬಂಧ ಹಾಕಬೇಕು. ಗಣ್ಯವ್ಯಕ್ತಿಗಳ ವಾಹನ ಸೇರಿದಂತೆ ಎಲ್ಲಾ ವಾಹನಗಳಿಗು ನಿರ್ಬಂಧ ವಿಧಿಸಬೇಕು. ಸರ್ಕಾರದಿಂದಲೇ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ಬಸ್ ಗಳನ್ನು ಬಿಡಬೇಕು. ಜೊತೆಗೆ ಚಾಮುಂಡಿ ಬೆಟ್ಟದಲ್ಲಿ ವಾಸ ಇರುವ 4 ಸಾವಿರ ಜನರಿಗೆ ನಗರದಲ್ಲಿ ಸ್ಥಳವಕಾಶ ಮಾಡಿಕೊಡಬೇಕು. ದೇವಸ್ಥಾನದ ಅರ್ಚಕರು ಹಾಗೂ ದೇವಾಲಯದ ಸಿಬ್ಬಂದಿಗೆ ಮಾತ್ರ ಉಳಿಯಲು ಅವಕಾಶಕೊಡಬೇಕು ಎಂದು ಸಾಹಿತಿ ಎಸ್.ಎಲ್. ಬೈರಪ್ಪ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಚಾಮುಂಡಿ ಬೆಟ್ಟದಲ್ಲೀಗಾ ಅಭಿವೃದ್ಧಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ ಮಾಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಮೈಸೂರಿನ ಜನ ಸೇರಿದಂತೆ ಅನೇಕರು ಸರ್ಕಾರದ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿರಂತರ ಮಳೆಯಿಂದಾಗಿ ಚಾಮುಂಡಿ ಬೆಟ್ಟ ಕುಸಿಯುತ್ತಿದೆ. ಈ ನಡುವೆ ಸರ್ಕಾರ ಕಾಮಗಾರಿ ಮಾಡಲು ಹೊರಟಿದೆ. ಸರ್ಕಾರದ ನಡೆಗೆ ಇತಿಹಾಸ ತಜ್ಞರು ಮತ್ತು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಚಾಮುಂಡಿಬೆಟ್ಟ ಉಳಿಸಿ ಅಭಿಯಾನವನ್ನು ಕೈಗೊಂಡಿದ್ದಾರೆ. ಸದ್ಯ ಈ ಬಗ್ಗೆ ಸಾಹಿತಿ ಎಸ್.ಎಲ್. ಬೈರಪ್ಪ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

Source: tv9kannada