ಗೂಗಲ್​ನಲ್ಲಿ ಡಾ. ರಾಜ್​ಕುಮಾರ್​ ಬಗ್ಗೆ ತಪ್ಪು ಮಾಹಿತಿ; ಪಾಠ ಕಲಿಸಲು ಈಗ ಕನ್ನಡಿಗರು ಮಾಡಬೇಕಿರೋದು ಏನು?

Jun 22, 2021

ರಿಷಬ್​ ಶೆಟ್ಟಿ ಅವರ ಮಾತಿಗೆ ಸ್ಪಂದಿಸಿರುವ ಅನೇಕರು ರಿಪೋರ್ಟ್​ ಮಾಡಿದ್ದಾರೆ. ‘ನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು. ರಿಪೋರ್ಟ್​ ಮಾಡಿದ್ದೇವೆ’ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಭಾಷೆ, ಕನ್ನಡದ ಧ್ವಜ ಸೇರಿದಂತೆ ಅನೇಕ ವಿಚಾರಗಳಲ್ಲಿ ಪರಭಾಷಿಕರು ಕಿರಿಕ್​ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ಆನ್​ಲೈನ್​ನಲ್ಲಿ ಕೆಲವು ಅಚಾತುರ್ಯಗಳು ನಡೆಯುತ್ತಿವೆ. ಕೆಲವೇ ದಿನಗಳ ಹಿಂದೆ ಕನ್ನಡವನ್ನು ಭಾರತದ ಅತಿ ಕೆಟ್ಟ ಭಾಷೆ ಎಂಬಂತೆ ಗೂಗಲ್​ ಸರ್ಚ್​ ರಿಸಲ್ಟ್​ ತೋರಿಸುತ್ತಿತ್ತು. ಈಗ ವರನಟ ಡಾ. ರಾಜ್​ಕುಮಾರ್​ ಅವರ ವಿಚಾರದಲ್ಲಿ ತಪ್ಪು ಮಾಹಿತಿ ಹರಡಲಾಗುತ್ತಿದೆ. ಈ ಬಗ್ಗೆ ಎಚ್ಚರಿಕೆ ನೀಡಲು ಅಭಿಮಾನಿಗಳು ಮತ್ತು ಚಿತ್ರರಂಗದವರು ಪ್ರಯತ್ನಿಸುತ್ತಿದ್ದಾರೆ.

ತಮಿಳಿನ ‘ವಿಕ್ರಂ ವೇದ’ ಸಿನಿಮಾದ ಪಾತ್ರವರ್ಗದ (Vikram Vedha Cast) ಬಗ್ಗೆ ಇಂಗ್ಲಿಷ್​ನಲ್ಲಿ ಸರ್ಚ್​ ಮಾಡಿದರೆ ಅದರಲ್ಲಿ ಅಣ್ಣಾವ್ರ ಹೆಸರು ಕಾಣಿಸಿಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ರಾಜ್​ಕುಮಾರ್​ ಅವರು ಹಾಫ್​ ಬಾಯ್ಲ್​ ಎಂಬ ಪಾತ್ರ ಮಾಡಿದ್ದಾರೆ ಎಂದು ತೋರಿಸುತ್ತಿದೆ. ಇದು ಕನ್ನಡಿಗರ ಅಸಮಾಧಾನಕ್ಕೆ ಕಾರಣ ಆಗಿದೆ.

ಈ ಬಗ್ಗೆ ಅನೇಕರು ಸೋಶಿಯಲ್​ ಮೀಡಿಯಾದಲ್ಲಿ ಧ್ವನಿ ಎತ್ತಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಇದರ ಸ್ಕ್ರೀನ್ ಶಾಟ್​ ಶೇರ್​ ಮಾಡಿಕೊಂಡು, ಈ ಬಗ್ಗೆ ಎಲ್ಲರೂ ರಿಪೋರ್ಟ್​ ಮಾಡಬೇಕು ಎಂದು ವಿನಂತಿಸಿಕೊಂಡಿದ್ದಾರೆ. ‘ಎಲ್ಲರಲ್ಲೂ ಒಂದು ಮನವಿ. ವಿಕ್ರಂ ವೇದ ತಮಿಳು ಚಿತ್ರದ ಗೂಗಲ್ ಪುಟದಲ್ಲಿ ನಮ್ಮ ಡಾ. ರಾಜ್​ಕುಮಾರ್ ಅವರ ಫೋಟೋ ಬೇರೆ ಹೆಸರಿನಲ್ಲಿ (half boil) ಅಂತ ನಮೂದಿಸಲಾಗಿದೆ. ದಯಮಾಡಿ ಅದನ್ನು ಗೂಗಲ್​ಗೆ ರಿಪೋರ್ಟ್​ ಮಾಡಿ. ತಪ್ಪು ಸರಿ ಹೋಗಲಿ’ ಎಂದು ರಿಷಬ್​ ಟ್ವೀಟ್​ ಮಾಡಿದ್ದಾರೆ.

ರಿಷಬ್​ ಅವರ ಮಾತಿಗೆ ಸ್ಪಂದಿಸಿರುವ ಅನೇಕರು ರಿಪೋರ್ಟ್​ ಮಾಡಿದ್ದಾರೆ. ‘ನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು. ರಿಪೋರ್ಟ್​ ಮಾಡಿದ್ದೇವೆ’ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಅನೇಕರು ತಾವು ರಿಪೋರ್ಟ್​ ಮಾಡಿದ ಸ್ಕ್ರೀನ್​ ಶಾಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

2017ರಲ್ಲಿ ತೆರೆಕಂಡ ತಮಿಳಿನ ‘ವಿಕ್ರಂ ವೇದ’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಮುಖ್ಯ ಪಾತ್ರದಲ್ಲಿ ವಿಜಯ್​ ಸೇತುಪತಿ ಮತ್ತು ಆರ್​. ಮಾಧವನ್ ನಟಿಸಿದ್ದರು. ಕನ್ನಡದ ಕಲಾವಿದರಾದ ಅಚ್ಯುತ್​ ಕುಮಾರ್​ ಮತ್ತು ಶ್ರದ್ಧಾ ಶ್ರೀನಾಥ್ ಕೂಡ ಅಭಿನಯಿಸಿದ್ದರು.

Source: Tv9Kannada