ಗುಜರಾತ್​ನಲ್ಲಿ ಡ್ರ್ಯಾಗನ್​ ಫ್ರೂಟ್​ಗೆ ಮರುನಾಮಕರಣ; ಇನ್ಮುಂದೆ ಈ ಹಣ್ಣು ‘ಕಮಲಂ’ ಎಂದ ಮುಖ್ಯಮಂತ್ರಿ

Jan 20, 2021

ಡ್ರ್ಯಾಗನ್​ ಫ್ರೂಟ್ ದುಬಾರಿಯಾದರೂ ಆರೋಗ್ಯಕ್ಕೆ ಸಂಬಂಧಪಟ್ಟ ಅನೇಕ ಉಪಯೋಗಗಳಿವೆ. ಈ ದಿನಗಳಲ್ಲಿ ಇದು ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಆದರೆ ಗುಜರಾತ್​ನಲ್ಲಿ ಡ್ರ್ಯಾಗನ್​ ಫ್ರೂಟ್​ನ ಹೆಸರು ಬದಲಾವಣೆಯಾದ ಬಗ್ಗೆ ಇನ್ನೂ ಎಲ್ಲರಿಗೂ ಮಾಹಿತಿ ತಲುಪಿಲ್ಲ.

ಗಾಂಧಿನಗರ: ಇಷ್ಟು ದಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ನಗರಗಳ ಹೆಸರನ್ನು ಬದಲಿಸುವುದನ್ನು ಕೇಳಿದ್ದೀರಿ. ಆದರೆ ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾಣಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಣ್ಣೊಂದರ ಹೆಸರನ್ನು ಬದಲಿಸಿದ್ದಾರೆ.

ಗುಜರಾತ್​ನ ಕಛ್​, ನವ್​ಸಾರಿ ಹಾಗೂ ಸೌರಾಷ್ಟ್ರದ ವಿವಿಧ ಭಾಗಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಡ್ರ್ಯಾಗನ್ ಫ್ರೂಟ್​ಗೆ ‘ಕಮಲಂ’ ಮರುನಾಮಕರಣ ಮಾಡಿದ್ದಾರೆ. ಈ ಬಗ್ಗೆ ಮಂಗಳವಾರ ಮಾಧ್ಯಮಗಳಿಗೆ ರೂಪಾಣಿ ಮಾಹಿತಿ ನೀಡಿದ್ದಾರೆ. ಈ ಹಣ್ಣಿಗೆ ಡ್ರ್ಯಾಗನ್​ ಎಂಬ ಹೆಸರು ಸೂಕ್ತವೆನಿಸುತ್ತಿಲ್ಲ. ಇದರ ಹೆಸರಿನ ಕಾರಣಕ್ಕೆ ಇದು ಚೀನಾದ್ದೇ ಇರಬಹುದಾ ಎನಿಸುತ್ತದೆ. ಹಾಗಾಗಿ ಕಮಲಂ ಎಂದು ಮರುನಾಮಕರಣ ಮಾಡಿದ್ದಾಗಿ ತಿಳಿಸಿದ್ದಾರೆ.

ಕಮಲಂ ಯಾಕೆ?
ಆದರೆ ಕಮಲಂ ಎಂಬ ಹೆಸರೇ ಯಾಕೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೂಪಾಣಿ, ಈ ಹಣ್ಣು ಕಮಲದ ಹೂವಿನಂತೆ ಇದೆ ಎಂದು ಇದನ್ನು ಬೆಳೆಯುವ ಅದೆಷ್ಟೋ ರೈತರು ಹೇಳಿದ್ದಾರೆ. ಹಾಗಾಗಿ ಕಮಲಂ ಎಂದೇ ಹೆಸರಿಟ್ಟಿದ್ದೇವೆಯೇ ಹೊರತು ಇದರಲ್ಲಿ ರಾಜಕೀಯ ಕಾರಣವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಬಿಜೆಪಿಯ ಸಿಂಬಲ್ ಕಮಲವಾಗಿದ್ದು, ಗುಜರಾತ್​ನಲ್ಲಿ ಪಕ್ಷದ ಪ್ರಧಾನ ಕಚೇರಿಯ ಹೆಸರೂ ಶ್ರೀ ಕಮಲಂ ಎಂದೇ ಆಗಿದೆ.

ಡ್ರ್ಯಾಗನ್​ ಫ್ರೂಟ್ ದುಬಾರಿಯಾದರೂ ಆರೋಗ್ಯಕ್ಕೆ ಸಂಬಂಧಪಟ್ಟ ಅನೇಕ ಉಪಯೋಗಗಳಿವೆ. ಈ ದಿನಗಳಲ್ಲಿ ಇದು ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಆದರೆ ಗುಜರಾತ್​ನಲ್ಲಿ ಡ್ರ್ಯಾಗನ್​ ಫ್ರೂಟ್​ನ ಹೆಸರು ಬದಲಾವಣೆಯಾದ ಬಗ್ಗೆ ಇನ್ನೂ ಎಲ್ಲರಿಗೂ ಮಾಹಿತಿ ತಲುಪಿಲ್ಲ.

Source:TV9 kannada