ಕೊವಿಡ್​ 19 ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ; TOCIRA ಔಷಧ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ

Sep 6, 2021

ಆಸ್ಪತ್ರೆಗೆ ದಾಖಲಾದ ಕೊವಿಡ್​ 19 ರೋಗಿಗಳಿಗೆ ಚಿಕಿತ್ಸೆ ನೀಡಲು ಟೊಸಿಲಿಜುಮಾಬ್ (Tocilizumab)ಔಷಧಿಯ ಜನರಿಕ್​ ಆವೃತ್ತಿಯನ್ನು ತುರ್ತು ಬಳಕೆ ಮಾಡಬಹುದು ಎಂದು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (DCGI) ನಮಗೆ ಅನುಮತಿ ನೀಡಿದೆ ಎಂದು ಹೈದರಾಬಾದ್ ಮೂಲದ ಔಷಧೀಯ ಕಂಪನಿ ಹೆಟೆರೋ ಗ್ರೂಪ್​ ಇಂದು ತಿಳಿಸಿದೆ. ಈ ಔಷಧಿಯನ್ನು ಕೊವಿಡ್​ 19 ಸೋಂಕು ಗಂಭೀರವಾಗಿರುವ ರೋಗಿಗಳಿಗೆ ಮಾತ್ರ ಬಳಸಬಹುದು ಎಂದು ಜುಲೈನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡಿತ್ತು.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಹೆಟೆರೋ ಗ್ರೂಪ್​ ಚೇರ್​ಮೆನ್​ ಡಾ. ಪಿ.ಸಾರಥಿ ರೆಡ್ಡಿ, ನಮ್ಮ ಕಂಪನಿಯ Tocilizumab ಔಷಧಿಯ ತುರ್ತು ಬಳಕೆಗೆ ಅನುಮೋದನೆ ನೀಡಿದ್ದಕ್ಕೆ ತುಂಬ ಸಂತೋಷವಾಗಿದೆ. ಜಾಗತಿಕವಾಗಿ ಈ ಔಷಧದ ಕೊರತೆ ಇರುವ ಹೊತ್ತಲ್ಲಿ, ಭಾರತದಲ್ಲಿ ಪೂರೈಕೆ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಡಿಸಿಜಿಐನ ಅನುಮೋದನೆ ತುಂಬ ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ. ಹಾಗೇ, ಔಷಧವನ್ನು ಸರಿಯಾದ ರೀತಿ, ನ್ಯಾಯಸಮ್ಮತವಾಗಿ ವಿತರಣೆ ಮಾಡುವ ನಿಟ್ಟಿನಲ್ಲಿ, ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ ಎಂದೂ ಹೇಳಿದ್ದಾರೆ.

ಹೆಟೆರೋ ಔಷಧ ಕಂಪನಿಯ ಟೊಸಿಲಿಜುಮಾಬ್ (Tocilizumab) ಔಷಧಿಯ ಜನರಿಕ್​ ಆವೃತ್ತಿಯಾದ TOCIRA ವನ್ನು ತುರ್ತು ಬಳಕೆ ಮಾಡಬಹುದು ಎಂದು ಡಿಸಿಜಿಐ ಇದೀಗ ಹೇಳಿದೆ. ಹಾಗಂತ ಇದನ್ನು ಯಾರ್ಯಾರೋ ಬಳಸುವಂತಿಲ್ಲ. ಆಸ್ಪತ್ರೆಗೆ ದಾಖಲಾದ, ಗಂಭೀರ ಸ್ಥಿತಿಯಲ್ಲಿರುವ, ಆಕ್ಸಿಜನ್​ ಪೂರೈಕೆ, ವೆಂಟಿಲೇಟರ್​​ ಅಗತ್ಯವಿರುವ ರೋಗಿಗಳಿಗೆ ಮಾತ್ರ ನೀಡಬಹುದಾಗಿದೆ. ಅದೂ ಕೂಡ ವೈದ್ಯರು ಸೂಚಿಸಬೇಕು.

Source:tv9kannada