ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪತ್ನಿ ರಾಜೇಶ್ವರಿ ತೇಜಸ್ವಿ‌ ನಿಧನ

Dec 14, 2021

ಬೆಂಗಳೂರಿನ ಎಚ್.ಎಸ್.ಆರ್ ಲೇಔಟ್‌ನಲ್ಲಿರುವ ಪುತ್ರಿ ಸುಸ್ಮಿತಾ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಪಾರ್ಥಿವ ಶರೀರದ ದರ್ಶನದ ಬಳಿಕ ಮಂಗಳವಾರ ಸಂಜೆ 5.30ಕ್ಕೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದೇಹದಾನ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ರಾಜೇಶ್ವರಿ ತೇಜಸ್ವಿ ಅವರು 1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯದ ಹೊಸ ಬಡಾವಣೆಯಲ್ಲಿ ತೀರಾ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರು. ಹೆಣ್ಣುಮಕ್ಕಳಿಗೂ ತಮ್ಮ ಕಾಲ ಮೇಲೆ ನಿಂತುಕೊಳ್ಳುವ ವಿದ್ಯಾಭ್ಯಾಸ ಕೊಡಬೇಕೆನ್ನುವ ತಮ್ಮ ತಂದೆಯ ಉದಾತ್ತ ಧ್ಯೇಯದಿಂದಾಗಿ ತತ್ವಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂ.ಎ. ಮಾಡಲು ಮೈಸೂರು ಮಾನಸ ಗಂಗೋತ್ರಿಗೆ ಬಂದರು.

ಅಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪರಿಚಯವಾಗಿ ಸ್ನೇಹ ಪ್ರೀತಿಗೆ ತಿರುಗಿತು. ಆನಂತರ ಇವರ ಬದುಕಿನ ದಿಕ್ಕು ಬದಲಾಯಿಸಿತು. 1966ರಲ್ಲಿ ಪೂರ್ಣಚಂದ್ರ ತೇಜಸ್ವಿರನ್ನು ವಿವಾಹವಾದರು.

‘ನನ್ನ ತೇಜಸ್ವಿ’ ರಾಜೇಶ್ವರಿ ಅವರ ಮೊಟ್ಟ ಮೊದಲ ಪುಸ್ತಕವಾಗಿದ್ದು, ಈಗ ಅದು ಐದನೇ ಮುದ್ರಣ ಕಂಡಿದೆ. ಇವರ ಹವ್ಯಾಸವೂ ವಿಭಿನ್ನವಾಗಿದ್ದವು. ಕ್ರೋಶ- ಟೈಲರಿಂಗ್, ಮೊಮ್ಮಕ್ಕಳು ಮತ್ತು ನೆರೆಹೊರೆಯ ಮಕ್ಕಳಿಗೆ Stamp collection. ಇವತ್ತಿಗೆ E-mail ಇದ್ದರೂ ಅಪರೂಪದ Stamp collection ಮಾಡಿದ್ದಾರೆ.

‘ನಮ್ಮ ಮನೆಗೂ ಬಂದರು ಗಾಂಧೀಜಿ’ ರಾಜೇಶ್ವರಿಯವರ ಎರಡನೆಯ ಪುಸ್ತಕವಾಗಿದೆ. ರಾಜೇಶ್ವರಿಯವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಇಬ್ಬರೂ ಸಾಫ್ಟ್‌ವೇರ್ ಇಂಜಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ರಾಜೇಶ್ವರಿ ತೇಜಸ್ವಿಯವರು ಅಪರೂಪದ ಹವ್ಯಾಸಗಳೊಂದಿಗೆ ಮೂಡಿಗೆರೆಯಲ್ಲಿ ಕಾಫಿತೋಟವನ್ನು ನೋಡಿಕೊಳುತ್ತಿದ್ದರು.

Source: oneindia.kannada