‘ಕಿರಿಕ್ ಪಾರ್ಟಿ 2’ ಸಿನಿಮಾಗಾಗಿ ಕಾಯುತ್ತಿದ್ದೀರಾ? ಹಾಗಾದರೆ ಇಲ್ಲಿದೆ ರಕ್ಷಿತ್ ಶೆಟ್ಟಿ ನೀಡಿದ ಗುಡ್ ನ್ಯೂಸ್!
‘ಕಿರಿಕ್ ಪಾರ್ಟಿ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿತ್ತು. ಅದರ 2ನೇ ಪಾರ್ಟ್ಗಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ. ಅಂಥವರಿಗೆ ಇದು ಸಿಹಿ ಸುದ್ದಿ.
ರಕ್ಷಿತ್ ಶೆಟ್ಟಿ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ ಸಿನಿಮಾ ಎಂದರೆ ಅದು ‘ಕಿರಿಕ್ ಪಾರ್ಟಿ’. ಕಾಲೇಜು ಕಥೆಯುಳ್ಳ ಆ ಸಿನಿಮಾ ಮೂಲಕ ರಕ್ಷಿತ್ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡರು. ‘ಕಿರಿಕ್ ಪಾರ್ಟಿ’ಯ ಸೀಕ್ವೆಲ್ ಯಾವಾಗ ಬರಲಿದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿ ಒಂದು ಗುಡ್ ನ್ಯೂಸ್ ಕೇಳಿಬಂದಿದೆ.
ಪ್ರಸ್ತುತ ರಕ್ಷಿತ್ ಶೆಟ್ಟಿ ಅವರು ‘777 ಚಾರ್ಲಿ’ ಮತ್ತು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಖ್ಯಾತಿಯ ಹೇಮಂತ್ ಎಂ. ರಾವ್ ನಿರ್ದೇಶನ ಮಾಡುತ್ತಿದ್ದು, ಮಾ.12ರಂದು ಮುಹೂರ್ತ ನೆರವೇರಿಸಲಾಗಿದೆ. ಬೆಂಗಳೂರಿನ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆ ರಕ್ಷಿತ್ ಮಾತನಾಡಿದರು. ಈ ಸಂದರ್ಭದಲ್ಲಿ ಅವರಿಗೆ ‘ಕಿರಿಕ್ ಪಾರ್ಟಿ 2’ ಬಗ್ಗೆ ಪ್ರಶ್ನೆ ಎದುರಾಯಿತು.
‘ಕಿರಿಕ್ ಪಾರ್ಟಿ’ ಸಿನಿಮಾ ಮಾಡಿದ ತಂಡವೇ ಈಗ ‘ಕಿರಿಕ್ ಪಾರ್ಟಿ 2’ ಮಾಡುತ್ತಿದೆ. ರಿಷಬ್ ಶೆಟ್ಟಿ ಅವರೇ ನಿರ್ದೇಶನದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಸ್ಕ್ರಿಪ್ಟ್ ಬರೆಯುವ ಕೆಲಸ ಆರಂಭ ಆಗಿದೆ. 2021ರಲ್ಲಿಯೇ ಚಿತ್ರೀಕರಣ ಮುಗಿಸಬೇಕು ಎಂಬ ಗುರಿ ಇಟ್ಟುಕೊಳ್ಳಲಾಗಿದೆ. ಅಂದರೆ ಚಿತ್ರದ ಕೆಲಸಗಳು ವೇಗವಾಗಿ ನಡೆಯುತ್ತಿವೆ ಎಂಬುದು ಖಚಿತ. 2016ರಲ್ಲಿ ಕಿರಿಕ್ ಪಾರ್ಟಿ ಚಿತ್ರವನ್ನು ಇಷ್ಟಪಟ್ಟವರು ಈಗ ಅದರ ಸೀಕ್ವೆಲ್ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
‘ಕಿರಿಕ್ ಪಾರ್ಟಿ’ ಮೂಲಕ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಬಹುದೊಡ್ಡ ಎಂಟ್ರಿ ಸಿಕ್ಕಿತ್ತು. ಮೊದಲ ಸಿನಿಮಾದಲ್ಲೇ ಅವರು ಕರುನಾಡ ಕ್ರಶ್ ಅಂತ ಫೇಮಸ್ ಆದರು. ನಂತರ ಪರಭಾಷೆಯಲ್ಲಿ ಅವರಿಗೆ ಅವಕಾಶಗಳು ಹುಡುಕಿಕೊಂಡು ಬಂದವು. ಸದ್ಯ ಅವರು ಬಾಲಿವುಡ್ನ ಕದ ತಟ್ಟಿದ್ದಾರೆ. ‘ಕಿರಿಕ್ ಪಾರ್ಟಿ 2’ ಸಿನಿಮಾದಲ್ಲಿ ರಶ್ಮಿಕಾ ಮತ್ತು ಸಂಯುಕ್ತಾ ಹೆಗಡೆ ಇರುವುದಿಲ್ಲ ಎಂಬುದು ಖಚಿತ. ಈ ವಿಚಾರವನ್ನು ರಕ್ಷಿತ್ ಕೂಡ ಸ್ಪಷ್ಟಪಡಿಸಿದ್ದಾರೆ. ಸೀಕ್ವೆಲ್ನಲ್ಲಿ ನಾಯಕಿಯರು ಬದಲಾಗಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಸದ್ಯಕ್ಕಂತೂ ರಕ್ಷಿತ್ ಶೆಟ್ಟಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಅವರ ಡ್ರೀಮ್ ಪ್ರಾಜೆಕ್ಟ್ ಆದಂತಹ ‘ಪುಣ್ಯಕೋಟಿ’ ಚಿತ್ರದ ಸ್ಕ್ರಿಪ್ಟ್ ಕೆಲಸಕ್ಕೆ ಅವರು ಸಮಯ ಮೀಸಲಿಡಬೇಕಿದೆ. ನಟನಾಗಿ ಅನೇಕ ಸಿನಿಮಾಗಳ ಕಥೆ ಕೇಳುತ್ತಿದ್ದಾರೆ. ಇಂಥ ಬ್ಯುಸಿ ಶೆಡ್ಯೂಲ್ನ ನಡುವೆ ಪ್ರತಿ ಭಾನುವಾರ ‘ಕಿರಿಕ್ ಪಾರ್ಟಿ 2’ ಚಿತ್ರಕ್ಕೆ ಸಂಬಂಧಿಸಿದಂತೆ ಟೀಮ್ ಜೊತೆ ಚರ್ಚೆ ನಡೆಸಲು ಅವರು ಸಮಯ ಮೀಸಲಿಡುತ್ತಿದ್ದಾರೆ.
Source:TV9Kannada