ಕಲಬುರಗಿ ಜನರಿಗೆ ಶುರುವಾಗಿದೆ ಡೆಂಗ್ಯೂ ಜ್ವರದ ಭೀತಿ; ಡೆಂಗ್ಯೂ ನಿಯಂತ್ರಣಕ್ಕೆ ಏನು ಮಾಡಬೇಕು?

Aug 20, 2021

ಕಲಬುರಗಿ: ಇಡೀ ಜಗತ್ತನ್ನು ಕೊರೊನಾ ಸೋಂಕು ಬಿಟ್ಟುಬಿಡದೇ ಕಾಡುತ್ತಿದೆ. ಕಲಬುರಗಿ ಜಿಲ್ಲೆಯ ಜನರಿಗೆ ಇದೀಗ ಕೊರೊನಾದ ಜತೆಗೆ ಡೆಂಗ್ಯೂ ಕೂಡ ಕಾಡಲು ಪ್ರಾರಂಭಿಸಿದೆ. ಜಿಲ್ಲೆಯಲ್ಲಿ ದಿಢೀರನೆ ಡೆಂಗ್ಯೂ ಜ್ವರದ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಕಂಗಾಲಾಗುವಂತೆ ಮಾಡಿದೆ. ಕಲಬುರಗಿ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ಹಾವಳಿ ಮತ್ತೆ ಪ್ರಾರಂಭವಾಗಿದೆ. ಕಳೆದ ಒಂದು ತಿಂಗಳಿಂದ ಕಲಬುರಗಿ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ದಿಢೀರನೆ ಹೆಚ್ಚಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಜಿಲ್ಲೆಯ ಜನರಲ್ಲಿ ಆರೋಗ್ಯ ಸಮಸ್ಯೆ ಕಾಣಿಸುವುದು ಅಪರೂಪ. ಆದರೆ ಮಳೆಗಾಲ ಪ್ರಾರಂಭವಾದಾಗಿನಿಂದ ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ಸೊಳ್ಳೆಯ ಹಾವಳಿ ಕೂಡಾ ಹೆಚ್ಚಾಗಿದ್ದರಿಂದ ಜನರು ಸೊಳ್ಳೆಯಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತಾಗಿದೆ. ಕೊರೊನಾ ಕಡಿಮೆಯಾದ ಮೇಲೆ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಮತ್ತೆ ಡೆಂಗ್ಯೂ ಕಾಟ ಪ್ರಾರಂಭವಾಗಿದ್ದರಿಂದ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಜ್ವರದಿಂದ ಬಳಲುತ್ತಿರುವವರಿಂದ ತುಂಬುತ್ತಿವೆ. ಇದು ಜಿಲ್ಲೆಯ ಜನರ ಆತಂಕವನ್ನು ಹೆಚ್ಚಿಸುತ್ತಿದೆ.

ಜುಲೈ ತಿಂಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಮೂವತ್ತು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಆಗಸ್ಟ್ ಮೊದಲ ಎರಡು ವಾರದಲ್ಲಿಯೂ ಮೂವತ್ತು ಜನರಿಗೆ ಡೆಂಗ್ಯೂ ಇರುವದು ದೃಢವಾಗಿದೆ. ಕಳೆದ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಇಬ್ಬರಿಂದ ಮೂವರಲ್ಲಿ ಕಾಣಿಸಿಕೊಂಡಿದ್ದ ಡೆಂಗ್ಯೂ ಜುಲೈ ತಿಂಗಳಿಂದ ಹೆಚ್ಚಾಗಿದೆ.

ಗ್ರಾಮೀಣ ಭಾಗಕ್ಕಿಂತ ನಗರದಲ್ಲಿಯೇ ಹೆಚ್ಚಾದ ಡೆಂಗ್ಯೂ
ಇನ್ನು ಕಲಬುರಗಿ ಜಿಲ್ಲೆಯಲ್ಲಿ ಗ್ರಾಮೀಣ ಭಾಗಕ್ಕಿಂತ ಹೆಚ್ಚಾಗಿ ನಗರ ಪ್ರದೇಶದಲ್ಲಿಯೇ ಹೆಚ್ಚಾಗಿ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತಿರುವದು ಜನರನ್ನು ಚಿಂತೆಗೀಡುಮಾಡಿದೆ. ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಮೂವತ್ತು ಡೆಂಗ್ಯೂ ಪ್ರಕರಣಗಳ ಪೈಕಿ, ಇಪ್ಪತ್ತು ಪ್ರಕರಣಗಳು ಕಲಬುರಗಿ ನಗರದಲ್ಲಿಯೇ ವರದಿಯಾಗಿವೆ. ಇದಕ್ಕೆ ಕಾರಣ ನಗರದಲ್ಲಿ ಸ್ವಚ್ಚತೆ ಇಲ್ಲದಿರುವುದು. ಜತೆಗೆ ಡೆಂಗ್ಯೂ ಸೊಳ್ಳೆಗಳ ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳದೇ ಇರುವದು. ಜುಲೈ ತಿಂಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗಿತ್ತು. ಹೀಗಾಗಿ ಹೆಚ್ಚಿನ ಕಡೆ ನೀರು ನಿಂತಲ್ಲಿಯೇ ನಿಂತಿದ್ದರಿಂದ ಸೊಳ್ಳೆಗಳ ಸಂತಾನೋತ್ಪತ್ತಿಗೆ ಹೆಚ್ಚಿನ ಅನುಕೂಲವಾಗಿತ್ತು. ಹೀಗಾಗಿ ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ಸೊಳ್ಳೆಗಳು ಹೆಚ್ಚಾಗಿವೆ. ಇದರಿಂದ ಸಾಕಷ್ಟು ಜನರು ಜ್ವರದಿಂದ ಬಳಲುತ್ತಿದ್ದಾರೆ.

ಡೆಂಗ್ಯೂ ನಿಯಂತ್ರಣಕ್ಕೆ ಜನರು ಮಾಡಬೇಕಾಗಿದ್ದೇನು?
ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಜೊತೆ ಜನರು ಕೂಡಾ ಸಹಕರಿಸಬೇಕು ಎನ್ನುತ್ತಾರೆ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು. ಹೌದು ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಸೊಳ್ಳೆ ಪರದೆ ಬಳಸಬೇಕು. ಮುಂಜಾನೆ ಮತ್ತು ಸಂಜೆ ಸಮಯದಲ್ಲಿ ಮೈ ಕೈ ಮುಚ್ಚುವಂತಹ ಉಡುಪುಗಳನ್ನು ಧರಿಸಬೇಕು. ಸೊಳ್ಳೆ ಬತ್ತಿಯನ್ನು ಬಳಸಿ, ಸೊಳ್ಳೆಗಳು ಬರದಂತೆ ನೋಡಿಕೊಳ್ಳಬೇಕು. ಮಕ್ಕಳು ಹೊರಗಡೆ ಆಟವಾಡಲು ಹೋಗುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಜ್ವರ ಸೇರಿದಂತೆ ಮೈ ಕೈ ನೋವು ಕಂಡುಬಂದರೆ, ನಿರ್ಲಕ್ಷ್ಯ ಮಾಡದೇ, ಮೊದಲು ತಪಾಸಣೆ ಮಾಡಿಸಿಕೊಳ್ಳಬೇಕು. ಆ ಮೂಲಕ ಸೊಳ್ಳೆಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಯಾರು ಕೂಡಾ ಆತಂಕ ಪಡಬಾರದು ಎಂದು ತಿಳಿಸಿದ್ದಾರೆ.

ಈಕುರಿತು ಟಿವಿ9 ಕನ್ನಡ ಡಿಜಿಟಲ್​ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಶರಣಬಸಪ್ಪ ಗಣಜಲಖೇಡ್, ‘ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಕಲಬುರಗಿ ಜಿಮ್ಸ್​ನಲ್ಲಿ ಡೆಂಗ್ಯೂ ಜ್ವರ ಪತ್ತೆಮಾಡುವ ಲ್ಯಾಬ್ ಕೂಡಾ ಇದ್ದು, ಜನರು ಡೆಂಗ್ಯೂ ಲಕ್ಷಣಗಳು ಇದ್ದರೆ ತಪಾಸಣೆ ಮಾಡಿಸಿಕೊಳ್ಳಬೇಕು. ಆತಂಕಪಡದೇ ಮೊದಲು ಚಿಕಿತ್ಸೆ ಪಡೆಯಬೇಕು. ಜೊತೆಗೆ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ಕೆಲ ಮನ್ನೆಚ್ಚೆರಿಕೆ ವಹಿಸಿದರೆ, ಡೆಂಗ್ಯೂ ಬರದಂತೆ ತಡೆಯಬಹುದು ಎಂದು ಸೂಚಿಸಿದರು.

ಈಕುರಿತು ಪ್ರತಿಕ್ರಿಯಿಸಿದ ಕಲಬುರಗಿ ನಿವಾಸಿ ಅನಿಲ್, ‘ಕೊರೊನಾ ಆತಂಕದ ನಡುವೆ ಜಿಲ್ಲೆಯಲ್ಲಿ ಇದೀಗ ಡೆಂಗ್ಯೂ ಜ್ವರ ಹಾವಳಿ ಹೆಚ್ಚಾಗಿರುವದರಿಂದ ಜನರ ಆತಂಕ ಹೆಚ್ಚಾಗಿದೆ. ಹೀಗಾಗಿ ಕಲಬುರಗಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ಡೆಂಗ್ಯೂ ನಿಗ್ರಹ ಮಾಡಬೇಕಿದೆ. ಪಾಗಿಂಗ್ ಮಾಡಿ, ಸೊಳ್ಳೆಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕಿದೆ. ಜೊತೆಗೆ ಜನರಿಗೂ ಕೂಡಾ ಸ್ವಚ್ಚತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಾಹಿತಿ ನೀಡುವ ಕೆಲಸ ಮಾಡಬೇಕಿದೆ’ ಎಂದು ಒತ್ತಾಯಿಸಿದರು.

Source: tv9 Kannada