ಓಲಾ ಕ್ಯಾಬ್ ಗೊತ್ತಲ್ಲ, ಅದೇ ಕಂಪನಿಯಿಂದ ಎಲೆಕ್ಟ್ರಿಕ್ ಸ್ಕೂಟರ್ ಬರ್ತಾ ಇದೆ!

Mar 9, 2021

ತಮಿಳುನಾಡಿನಲ್ಲಿ ಬೃಹತ್ ದ್ವಿಚಕ್ರವಾಹನ ಉತ್ಪದನಾ ಘಟಕ ಆರಂಭದೊಂದಿಗೆ ಸುದ್ದಿಯಲ್ಲಿದ್ದ ಆಪ್ ಆಧರಿತ ಸಾರಿಗೆ ಒದಗಿಸುವ ಓಲಾ, ತಾನು ಉತ್ಪಾದಿಸಲಿರುವ ದ್ವಿಚಕ್ರವಾಹನ ಇ-ಸ್ಕೂಟರ್‌ನ ಮೊದಲ ಇಮೇಜ್ ಅನ್ನು ಬಹಿರಂಗಗೊಳಿಸಿದೆ.

ಓಲಾ ಎಲೆಕ್ಟ್ರಿಕ್ ಕಂಪನಿಯು ಈ ಭಾವಚಿತ್ರಗಳನ್ನು ಬಿಡುಗಡೆ ಮಾಡಿದೆ. ಓಲಾ ಸ್ಕೂಟರ್ ಎಟೆರ್ಗೋ ಆಪ್‌ಸ್ಕೂಟರ್ ಆಧರಿತವಾಗಿರಲಿದೆ. ಕಳೆದ ವರ್ಷವೇ ಓಲಾ ಆಮಸ್ಟರ್ ಡ್ಯಾಂ ಮೂಲದ ಈ ಎಟೆರ್ಗೋ ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡಿತ್ತು. ತಮಿಳುನಾಡಿನಲ್ಲಿ ನಿರ್ಮಾಣವಾಗುತ್ತಿರುವ ಬಹೃತ್ ಪ್ಲಾಂಟ್‌ನಲ್ಲಿ ಈ ಹೊಸ ಸ್ಕೂಟರ್ ತಯಾರಲಾಗಲಿದೆ. ಇಲ್ಲಿ ತಯಾರಾಗಲಿರುವ ಸ್ಕೂಟರ್‌ಗಳನ್ನು ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಮಾಡುವ ಯೋಜನೆ ಇದೆ.

ಈಗ ಬಿಡುಗಡೆಯಾಗಿರುವ ಇಮೇಜ್‌ಗಳು ಮುಂಬರುವ ಓಲಾ ಇ ಸ್ಕೂಟರ್‌ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಬಿಟ್ಟುಕೊಡುತ್ತವೆ. ಓಲಾ ಇ ಸ್ಕೂಟರ್‌ನ ವಿನ್ಯಾಸವು ಎಟೆರ್ಗೋ ಆಪ್‌ಸ್ಕೂಟರ್ ಅನ್ನೇ ಹೋಲುತ್ತದೆ. ಇದು ನಿಯೋ ರೆಟ್ರೋ ಸ್ಟೈಲ್ ಆಗಿದೆ. ಡಿಆರ್‌ಎಲ್‌ನೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್ ಆಕರ್ಷವಾಗಿದ್ದು, ರೌಂಡ್ ಪ್ರೊಫೈಲ್‌ನಲ್ಲಿದೆ. ಅಲಾಯ್ ವ್ಹೀಲ್‌ಗಳಿದ್ದು, ರ್ಯಾಪ್ ರೌಂಡ್ ಟೇಲ್‌ಲೈಟ್ ಕ್ಲಸ್ಟರ್ ಇದೆ. ಟೆಲಿಸ್ಕೋಪಿಕ್ ಫೋರ್ಕ್ಸ್, ಡುಯಲ್ ಡಿಸ್ಕ್ ಬ್ರೇಕ್ಸ್, ಫೈಬರ್ ಪ್ಯಾನೆಲ್ ಸೇರಿದಂತೆ ಎಲ್ಲ ಎಲ್‌ಇಡಿ ಲೈಟಿನಿಂಗ್ ಫೀಚರ್‌ಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ.

ಸ್ಕೂಟರ್‌ನಲ್ಲಿ ಪರ್ಮೇನೆಂಟ್ ಮ್ಯಾಗ್ನೇಟ್ ಸಿಂಕ್ರೋನಸ್(ಪಿಎಂಎಸ್) ಮೋಟಾರ್ ಇರಲಿದ್ದು, ಹಿಂದಿನ ಚಕ್ರಕ್ಕೆ ತನ್ನ ಪವರ್ ರವಾನಿಸಲಿದೆ. ಜೊತೆಗೆ, ಒಮ್ಮೆ ಚಾರ್ಜ್ ಮಾಡಿದರೆ ನೂರು ಕಿ.ಮೀ.ವರೆಗೂ ಇದು ಸ್ಕೂಟರ್ ಬ್ಯಾಟರಿ ಬಾಳಿಕೆ ಬರಲಿದೆ.

ಓಲಾ ಇ ಸ್ಕೂಟರ್ ಈಗಾಗಲೇ ಮಾರುಕಟ್ಟೆಯಲ್ಲಿರುವ ಬಜಾಜ್ ಆಟೋ, ಎಥೇರ್ ಎನರ್ಜಿ ಮತ್ತು ಟಿವಿಎಸ್ ಸೇರಿದಂತೆ ದ್ವಿಚಕ್ರವಾಹನಗಳಿಗೆ ತೀವ್ರ ಪೈಪೋಟಿ ನೀಡಬಹುದು.

ತಮಿಳುನಾಡಿನಲ್ಲಿ ಬೃಹತ್ ಘಟಕ

ಓಲಾ ತಮಿಳುನಾಡಿನಲ್ಲಿ ಜಗತ್ತಿನ ಅತಿದೊಡ್ಡ ದ್ವಿಚಕ್ರವಾಹನ ಉತ್ಪಾದನಾ ಘಟಕವನ್ನು ಆರಂಭಿಸುತ್ತಿದೆ! ಈ ಫ್ಯಾಕ್ಟರಿಯನ್ನು 500 ಎಕರೆಯಲ್ಲಿ ನಿರ್ಮಿಸಲಾಗುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ತಮಿಳುನಾಡು ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಕಂಪನಿ ಒಟ್ಟು 2,400 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ ಮತ್ತು ಜನವರಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾಗಿದೆ. ಈ ಹಿನ್ನೆಯಲ್ಲಿ ಜಗತ್ತಿನ ಅತಿ ದೊಡ್ಡ ದ್ವಿಚಕ್ರವಾಹನ ಉತ್ಪಾದನಾ ಘಟಕದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಘಟಕದ ಮೊದಲನೇ ಹಂತವು ಮುಂದಿನ ಕೆಲವೇ ತಿಂಗಳಲ್ಲಿ ಕಾರ್ಯಾಚರಣೆ ಮಾಡಲಿದೆ ಎಂಬ ಕಂಪನಿ ಹೇಳಿಕೆಯನ್ನು ಹಲವು ವೆಬ್‌ತಾಣಗಳು ವರದಿ ಮಾಡಿವೆ.

ದಾಖಲೆಯ 10 ಮಿಲಿಯನ್ ಮ್ಯಾನ್‌ ಅವರ್ಸ್‌ನಲ್ಲಿ ಘಟಕವನ್ನು ನಿರ್ಮಾಣ ಮಾಡುವ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದು ಓಲಾ ಕಂಪನಿ ಹೇಳಿಕೊಂಡಿದೆ. ಹಾಗೆಯೇ, ಘಟಕ ನಿರ್ಮಾಣದ ವೇಳೆ ಪರಿಸರ ಸಮತೋಲವನ್ನು ಕಾಯ್ದುಕೊಳ್ಳುವ ಬಗ್ಗೆ ಆಸಕ್ತಿ ವಹಿಸಿದೆ. ಪ್ಲಾಂಟ್ ನಿರ್ಮಾಣವಾಗಲಿರುವ ಜಾಗದಲ್ಲಿರುವ ಹಸಿರನ್ನು ಕಾಯ್ದುಕೊಂಡೇ ಘಟಕ ನಿರ್ಮಿಸಲಾಗುತ್ತಿದೆ ಎಂಬುದು ಕಂಪನಿಯ ಅಂಬೋಣ.

ಅತಿ ದೊಡ್ಡ ಘಟಕ ಎಂಬ ಅಭಿದಾನ ಹೊಂದಲಿರುವ ಈ ಘಟಕದ ಮೊದಲನೆ ಹಂತದ ಕಾರ್ಯಾಚರಣೆ ಶುರುವಾದ ಆರಂಭದಲ್ಲಿ ವರ್ಷಕ್ಕೆ 20 ಲಕ್ಷ ಯನಿಟ್ಸ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಲಿದೆ. ಈ ಘಟಕದಲ್ಲಿ ಓಲಾ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳನ್ನು ಉತ್ಪಾದಿಸಲಿದೆ. ಇಲ್ಲಿ ತಯಾರಾಗುವ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳನ್ನು ಭಾರತದಲ್ಲ ಮಾತ್ರ ಮಾರಾಟ ಮಾಡುವುದದಲ್ಲದೇ ಯುರೋಪ್, ಇಂಗ್ಲೆಂಡ್, ಲ್ಯಾಟಿನ್ ಅಮೆರಿಕಾ, ಏಷ್ಯಾ ಪೆಸಿಫಿಕ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಮಾರುಕಟ್ಟೆಗಳಿಗೆ ಇಲ್ಲಿಂದಲೇ ರಫ್ತು ಮಾಡಲಿದೆ. ಹಾಗಾಗಿ, ಎಲೆಕ್ಟ್ರಿಕ್ ದ್ವಿಚಕ್ರವಾಹನ ಉತ್ಪಾದನೆಯಲ್ಲಿ ಈ ಘಟಕವು ಮಹತ್ವದ ಪಾತ್ರ ನಿರ್ವಹಿಸಲಿದೆ.

10,000 ಜನರಿಗೆ ಉದ್ಯೋಗ

ಜಗತ್ತಿನ ಬೃಹತ್ ದ್ವಿಚಕ್ರವಾಹನ ಉತ್ಪಾದನಾ ಘಟಕ ನಿರ್ಮಾಣ ಮಾಡುತ್ತಿರುವ ಓಲಾ ಅಂದಾಜು ಹತ್ತು ಸಾವಿರ ಜನರಿಗೆ ಉದ್ಯೋಗ ಕಲ್ಪಿಸಲಿದೆ. ಈ ಕೈಗಾರಿಕೆಯು 4.0 ಕೈಗಾರಿಕಾ ಗುಣಮಟ್ಟವನ್ನು ಕಾಪಾಡಿಕೊಳ್ಳಲಿದೆ. ಇಲ್ಲಿ ತಯಾರಾಗುವ ದ್ವಿಚಕ್ರವಾಹನಗಳಿಗೆ ಓಲಾದ್ದೇ ಎಐ ಎಂಜಿನ್ ಮತ್ತು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ನಿಮಗೆ ಗೊತ್ತಿಲ್ಲದಿರುವ ಸಂಗತಿ ಏನೆಂದರೆ, ಈ ಘಟಕದಲ್ಲಿ 5000ಕ್ಕೂ ಹೆಚ್ಚು ಆಟೋಮ್ಯಾಟೆಡ್ ರೊಬೋಟ್‌ಗಳು ಮತ್ತು ಆಟೋಮ್ಯಾಟೆಡ್ ಗೈಡೆಡ್ ವಾಹನಗಳು ಕಾರ್ಯ ನಿರ್ವಹಿಸಲಿವೆ. ಈ ರೀತಿಯ ಪೂರ್ತಿ ಪ್ರಕ್ರಿಯೆ ಆರಂಭವಾಗಲು ಈ ಘಟಕವು ಪೂರ್ಣ ಪ್ರಮಾಣದಲ್ಲಿ ಆರಂಭವಾಗಬೇಕು.

Source: Suvarna News