ಬೆಂಗಳೂರು: ಒಡಿಶಾದಲ್ಲಿ (Odisha) 3 ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಹಿನ್ನಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಈ ಭಾಗದಲ್ಲಿ ಸಾಗಬೇಕಿದ್ದ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಇದೇ ಮಾರ್ಗವಾಗಿ ಸಂಚರಿಸಬೇಕಿದ್ದ ಬೆಂಗಳೂರು-ಗುವಾಹಟಿ ರೈಲು ಬೆಂಗಳೂರಿನಲ್ಲೇ ನಿಂತಿದೆ.
ಒಡಿಶಾ ಅಪಘಾತದ ಹಿನ್ನಲೆಯಲ್ಲಿ ಬೆಂಗಳೂರು-ಗುವಾಹಟಿ (Guwahati) ರೈಲು ಸಂಚಾರ ರದ್ದಾಗಿದೆ. 10:40 ಕ್ಕೆ ಗುವಾಹಟಿ, ಬೈಯಪ್ಪನಹಳ್ಳಿಯ SMVT ರೈಲು ನಿಲ್ದಾಣದಿಂದ ರೈಲು ಹೊರಡಬೇಕಿತ್ತು. ಬೆಂಗಳೂರಿನಿಂದ (Bengaluru) ಒಡಿಶಾಗೆ ತೆರಳಲು ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಬೆಂಗಳೂರಿನ SMVT ರೈಲು ನಿಲ್ದಾಣದಲ್ಲೇ (SMT Railway Station) ಪ್ರಯಾಣಿಕರು ಪರದಾಡುವಂತಾಗಿದೆ.
ರೈಲು ಪ್ರಯಾಣ ರದ್ದಾಗಿರುವುದಕ್ಕೆ ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ. ಟಿಕೆಟ್ ಹಣ ವಾಪಸ್ ಪಡೆಯುವ ವಿಚಾರವಾಗಿ ಪ್ರಯಾಣಿಕರಿಂದ ವಾಗ್ವಾದ ಶುರುವಾಗಿತ್ತು. ಪರಿಣಾಮವಾಗಿ ರೈಲ್ವೆ ನಿಲ್ದಾಣದ ಬಳಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಜನರಲ್ ಟಿಕೆಟ್ ಪಡೆದಿದ್ದ ಪ್ರಯಾಣಿಕರಿಗೆ ರೈಲ್ವೆ ಅಧಿಕಾರಿಗಳು (Railway Officers) ಟಿಕಟ್ ಹಣ ವಾಪಸ್ ನೀಡುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಜನ ಟಿಕೆಟ್ ಹಣ ವಾಪಸ್ ಪಡೆದರು.
ಹೌರ ಮಾರ್ಗವಾಗಿ ತೆರಳಬೇಕಿದ್ದ ಮೂರು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಬಾಗಲ್ಪುರ್ ಎಕ್ಸ್ಪ್ರೆಸ್, ಹೌರಾ ಎಕ್ಸ್ಪ್ರೆಸ್, ಕಾಮಾಕ್ಯ ಎಕ್ಸ್ಪ್ರೆಸ್ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಮೂರು ರೈಲುಗಳ ಸಂಚಾರ ರದ್ದಾದ ಹಿನ್ನಲೆ ಪ್ರಯಾಣಿಕರು ಪರದಾಡುವಂತಾಗಿದೆ. ತಮ್ಮ ಊರುಗಳಿಗೆ ತೆರಳಲು ಮೂರ್ನಾಲ್ಕು ತಿಂಗಳ ಹಿಂದೆಯೇ ಟಿಕೆಟ್ ಬುಕ್ ಮಾಡಿದ್ದರು. ಸದ್ಯ ರೈಲ್ವೆ ಸಿಬ್ಬಂದಿ ಟಿಕೆಟ್ ಬುಕ್ಕಿಂಗ್ ಹಣ ಹಿಂತಿರುಗಿಸುತ್ತಿದ್ದಾರೆ.