ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಜಮ್ಮು ಪ್ರವಾಸ ಇಂದಿನಿಂದ; ವಿಶೇಷ ಸ್ಥಾನಮಾನ ರದ್ದು ಬಳಿಕ ಮೊದಲ ಬಾರಿಗೆ ಭೇಟಿ

Sep 30, 2021

ಜಮ್ಮು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಮುಖ್ಯಸ್ಥ ಮೋಹನ್​ ಭಾಗವತ್ (RSS chief Mohan Bhagwat)​ ಅವರು ಇಂದಿನಿಂದ ನಾಲ್ಕು ದಿನಗಳ ಕಾಲ ಜಮ್ಮು ಪ್ರವಾಸ ಹಮ್ಮಿಕೊಂಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ 2019ರಲ್ಲಿ ವಿಶೇಷ ಸ್ಥಾನಮಾನ (ಆರ್ಟಿಕಲ್​ 370 ಮತ್ತು 35 ಎ) ನ್ನು ರದ್ದುಗೊಳಿಸಿದ ಮೇಲೆ ಇದೇ ಮೊದಲ ಬಾರಿಗೆ ಮೋಹನ್​ ಭಾಗವತ್​ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಅಂದರೆ 2016ರಲ್ಲಿ ಭೇಟಿ ನೀಡಿದ ಬಳಿಕ ಅವರು ಮತ್ತೆ ಅಲ್ಲಿಗೆ ಹೋಗಿರಲಿಲ್ಲ. ಈ ನಾಲ್ಕು ದಿನಗಳ ಪ್ರವಾಸದಲ್ಲಿ ಮೋಹನ್​ ಭಾಗವತ್​ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಕ್ಟೋಬರ್​ 2ರಂದು ಭಾಗವತ್​ ಜಮ್ಮುವಿನ ಜೋರಾವರ್​ ಸಿಂಗ್​ ಸಭಾಂಗಣದಲ್ಲಿ ಸೆಮಿನಾರ್​ನಲ್ಲಿ ಮಾತನಾಡುವರು. ನಂತರ ಜಮ್ಮು-ಕಾಶ್ಮೀರದಲ್ಲಿ, ಶಿಕ್ಷಣ, ಸಾರ್ವಜನಿಕ ಜಾಗೃತಿ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಪರಿಸರ ವಿಜ್ಞಾನ, ಜಲ ಸಂರಕ್ಷಣೆ, ಸಾಮಾಜಿಕ ಸಮಾನತೆ ಸೇರಿ ಹಲವು ಕ್ಷೇತ್ರಗಳಲ್ಲಿ ಆರ್​ಎಸ್​ಎಸ್​ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದ್ದು, ಅದರ ಪ್ರಗತಿ ಪರಿಶೀಲನೆಯನ್ನು ನಡೆಸಲಿದ್ದಾರೆ.

ಆರ್​ಎಸ್​ಎಸ್​ ಕಾರ್ಯಕರ್ತರನ್ನುದ್ದೇಶಿಸಿ ಮಾತು
ಅಕ್ಟೋಬರ್​ 3ರಂದು ಮೋಹನ್​​ ಭಾಗವತ್​ ಅವರು ಜಮ್ಮವಿನಲ್ಲಿ ಆರ್​ಎಸ್​ಎಸ್​ ಪ್ರಚಾರಕ್​​​ಗಳ ಜತೆಗೆ ಸಭೆ ನಡೆಸಲಿದ್ದು, ಅಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಆರ್​ಎಸ್​ಎಸ್​ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇನ್ನುಬರುವವರ್ಷ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಬಗ್ಗೆ ಕೂಡ ಯೋಜನಾಧಿಕಾರಿಗಳೊಂದಿಗೆ ಮೋಹನ್​ ಭಾಗವತ್​ ಚರ್ಚಿಸಲಿದ್ದಾರೆ ಎಂದೂ ಹೇಳಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಬೇಕು ಎಂಬುದು ಆರ್​ಎಸ್​ಎಸ್​ನ ಬಹುದಿನಗಳ ಬೇಡಿಕೆಯಾಗಿತ್ತು. ಅದರಂತೆ 2019ರಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದನ್ನು ರದ್ದುಗೊಳಿಸಿದೆ. ನಂತರ ಜಮ್ಮು-ಕಾಶ್ಮೀರ ಮತ್ತು ಲಡಾಕ್​ನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಿದೆ. ಈ ನಿರ್ಧಾರವನ್ನು ಅತ್ಯಂತ ಖುಷಿಯಿಂದ ಸ್ವಾಗತಿಸಿದ್ದ ಆರ್​ಎಸ್​ಎಸ್​ ಪ್ರಧಾನಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ, ರಾಜ್ಯದ ಏಕೀಕರಣದ ಕನಸು ಈಗ ಸಾಕಾರಗೊಂಡಿದೆ ಎಂದು ಹೇಳಿದ್ದರು.

Source:tv9Kannada