ಆನ್ಲೈನ್ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಲು ಆಧಾರ್ ಕಾರ್ಡ್, ಪಾಸ್ಪೋರ್ಟ್ ಕಡ್ಡಾಯವಾಗಲಿದೆ; ಶೀಘ್ರದಲ್ಲೇ ನಿಯಮ ಜಾರಿ
ಕೆಲವು ಮಧ್ಯವರ್ತಿಗಳು ರೈಲ್ವೆ ಟಿಕೆಟ್ನ್ನು ತ್ವರಿತವಾಗಿ ಬುಕ್ ಮಾಡಲು ಮುಂದುವರಿದ ಸಾಫ್ಟ್ವೇರ್ ಬಳಸುತ್ತಾರೆ. ಇದರಿಂದಾಗಿ ಒಂದೇ ಸಲಕ್ಕೆ 10-15 ಟಿಕೆಟ್ ಬುಕ್ ಮಾಡಬಹುದು. ನಕಲಿ ಪ್ರಯಾಣಿಕರ ಹೆಸರಿನಲ್ಲಿ ಟಿಕೆಟ್ ಬುಕ್ ಮಾಡಿ, ನಂತರ ಪ್ರೀಮಿಯಂ ದರಕ್ಕೆ ಮಾರಾಟ ಮಾಡುತ್ತಾರೆ ಎಂದು ಡಿಜಿ ಮಾಹಿತಿ ನೀಡಿದ್ದಾರೆ.
ಆನ್ಲೈನ್ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವ ಏಜೆಂಟ್ಗಳು ಮಾಡಬಹುದಾದ ಅಕ್ರಮಗಳನ್ನು ತಡೆಯಲು ಭಾರತೀಯ ರೈಲ್ವೆ ಒಂದು ಹೊಸ ಕ್ರಮವನ್ನು ಜಾರಿಗೊಳಿಸಲು ಮುಂದಾಗಿದೆ. ಆನ್ಲೈನ್ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವಾಗ ಆಧಾರ್ ಕಾರ್ಡ್ ಮತ್ತು ಪಾಸ್ಪೋರ್ಟ್ನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಹೇಳಿದೆ. ಇಷ್ಟು ದಿನ ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ ಹಾಕಿ ವೆಬ್ಸೈಟ್ನಲ್ಲಿ ಸರಳವಾಗಿ ಲಾಗಿನ್ ಆಗಿ, ರೈಲ್ವೆ ಟಿಕೆಟ್ ಬುಕ್ ಮಾಡಬಹುದಿತ್ತು. ಆದರೆ ಇನ್ನುಮುಂದೆ ಲಾಗಿನ್ ಆಗುವವರು ತಮ್ಮ ಪಾಸ್ಪೋರ್ಟ್ ಅಥವಾ ಆಧಾರ್ಕಾರ್ಡ್ನಂತಹ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ.
ರೈಲ್ವೆ ಟಿಕೆಟ್ ಬುಕ್ಕಿಂಗ್ ವೆಬ್ಸೈಟ್ ದುರ್ಬಳಕೆ ಆಗುತ್ತಿರುವುದು ಹೆಚ್ಚಾದ ಬೆನ್ನಲ್ಲೇ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ಈ ನಿರ್ಧಾರ ಕೈಗೊಂಡಿದೆ. ಅದೆಷ್ಟೋ ದಲ್ಲಾಳಿಗಳು ಟಿಕೆಟ್ ಬುಕ್ಕಿಂಗ್ ಹೆಸರಲ್ಲಿ ಪ್ರಯಾಣಿಕರಿಗೆ, ನಿಗಮಕ್ಕೆ ವಂಚನೆ ಮಾಡುತ್ತಿದ್ದಾರೆ. ಅದನ್ನು ತಡೆಯಲು, ನಮ್ಮ ವೆಬ್ಸೈಟ್ಗೆ ಲಾಗಿನ್ ಆಗಲು ಆಧಾರ್ ಕಾರ್ಡ್, ಪಾಸ್ಪೋರ್ಟ್ಗಳನ್ನು ಕಡ್ಡಾಯ ಮಾಡುವ ಬಗ್ಗೆ ಕ್ರಮಕೈಗೊಳ್ಳುತ್ತಿದ್ದೇವೆ ಎಂದು ರೈಲ್ವೆ ರಕ್ಷಣಾ ದಳದ ಡಿಜಿ ಅರುಣ್ ಕುಮಾರ್ ತಿಳಿಸಿದ್ದಾರೆ.
ಕೆಲವು ಮಧ್ಯವರ್ತಿಗಳು ರೈಲ್ವೆ ಟಿಕೆಟ್ನ್ನು ತ್ವರಿತವಾಗಿ ಬುಕ್ ಮಾಡಲು ಮುಂದುವರಿದ ಸಾಫ್ಟ್ವೇರ್ ಬಳಸುತ್ತಾರೆ. ಇದರಿಂದಾಗಿ ಒಂದೇ ಸಲಕ್ಕೆ 10-15 ಟಿಕೆಟ್ ಬುಕ್ ಮಾಡಬಹುದು. ನಕಲಿ ಪ್ರಯಾಣಿಕರ ಹೆಸರಿನಲ್ಲಿ ಟಿಕೆಟ್ ಬುಕ್ ಮಾಡಿ, ನಂತರ ಪ್ರೀಮಿಯಂ ದರಕ್ಕೆ ಮಾರಾಟ ಮಾಡುತ್ತಾರೆ ಎಂದು ಡಿಜಿ ಮಾಹಿತಿ ನೀಡಿದ್ದಾರೆ. ವೆಬ್ಸೈಟ್ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವ್ಯವಸ್ಥೆ ಶೀಘ್ರದಲ್ಲೇ ಆಗುತ್ತದೆ. ಆದರೆ ಪಾಸ್ಪೋರ್ಟ್ ಲಿಂಕ್ ಮಾಡುವ ಸಂಬಂಧ ಕೆಲವು ಅಧಿಕಾರಿಗಳೊಂದಿಗೆ ಮಾತುಕತೆ ನಡೆಯುತ್ತಿದ್ದು, ಅದೂ ಕೂಡ ಆದಷ್ಟು ಬೇಗನೇ ಜಾರಿಯಾಗುತ್ತದೆ. ಹೀಗೆ ಲಾಗಿನ್ ಮಾಡುವಾಗ ಆಧಾರ್ ಕಾರ್ಡ್ ಅಥವಾ ಪಾಸ್ಪೋರ್ಟ್ ಕಡ್ಡಾಯವಾಗಿ ಒದಗಿಸಬೇಕು ಎಂಬ ನಿಯಮ ಜಾರಿಯಾದರೆ ಅಕ್ರಮಗಳನ್ನು ಪತ್ತೆಹಚ್ಚಬಹುದು ಎಂದೂ ಐಆರ್ಸಿಟಿಸಿ ಹೇಳಿದೆ.
ಹೀಗೆ ಮಧ್ಯವರ್ತಿಗಳ ಹೆಸರಲ್ಲಿ ಅಕ್ರಮವಾಗಿ ರೈಲ್ವೆ ಟಿಕೆಟ್ ಬುಕ್ ಮಾಡುವವರಿಗೆ ನೀಡಲಾಗುವ ಶಿಕ್ಷೆ ಪ್ರಮಾಣವನ್ನೂ ಭಾರತೀಯ ರೈಲ್ವೆ ಹೆಚ್ಚಿಸಿದೆ. 2018ರಿಂದ ಈ ಬಾರಿಯ ಮೇ ತಿಂಗಳವರೆಗೆ ಇಂಥ ಸುಮಾರು 14,250 ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದೆ.
Source: Tv9Kannada