ಆಗಸ್ಟ್ 23 ರಿಂದ ಹೈಸ್ಕೂಲ್ ತೆರೆಯಲು ತಯಾರಿ; ಸೋಂಕಿನ ಪ್ರಮಾಣ ಏರಿಕೆಯಾದರೆ ಶಾಲೆ ಮತ್ತೆ ಬಂದ್

Aug 7, 2021

ಬೆಂಗಳೂರು: ಶಾಲಾ ಕಾಲೇಜುಗಳು ಆಗಸ್ಟ್ 23 ರಿಂದ ಆರಂಭ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೊವಿಡ್ ನಿರ್ವಹಣೆ ಕುರಿತು ಪರಿಣಿತರ ಜತೆ ಸಭೆ ನಡೆಸಿದ ನಂತರ ಆಗಸ್ಟ್ 6 ರಂದು ತಿಳಿಸಿದ್ದರು. ಆಗಸ್ಟ್‌ 23ರಿಂದ 9, 10, 12ನೇ ತರಗತಿಗಳು ಆರಂಭವಾಗಲಿವೆ. ನಂತರ 1 ರಿಂದ 8 ರವರೆಗಿನ ಶಾಲೆಗಳ ಆರಂಭದ (School Opening) ಬಗ್ಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದ್ದರು. ಆದರೆ ಮೂರನೇ ಅಲೆ ಆತಂಕ ದಿನೇ ದಿನೇ ಹೆಚ್ಚುತ್ತಿದ್ದು, ಈ ನಡುವೆ ಶಾಲೆ ಆರಂಭಿಸುವುದು ಬೇಡ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಗಸ್ಟ್ 23 ರಿಂದ ಹೈಸ್ಕೂಲ್ ತೆರೆಯಲು ಈಗಾಗಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಆದರೆ ಸೋಂಕಿನ ಪ್ರಮಾಣ 5 ಕ್ಕೆ ಏರಿಕೆಯಾದರೆ ಹೈಸ್ಕೂಲ್​ಗಳು ಮತ್ತೆ ಬಂದ್ ಆಗಲಿದ್ದು, 9 ರಿಂದ 12 ನೇ ತರಗತಿ ಮಕ್ಕಳಿಗೆ ಭೌತಿಕ ಪಾಠ ನಡೆಸುವುದು ಸೂಕ್ತ ಎಂದು ತಜ್ಞರು ಸೂಚಿಸಿದ್ದಾರೆ. ಹೀಗಾಗಿ ಆಗಸ್ಟ್ 23 ರ ಒಳಗೆ ಸೋಂಕಿನ ಪ್ರಮಾಣ ಏರಿಕೆಯಾದರೆ ಶಾಲೆಗಳನ್ನು ಆರಂಭ ಮಾಡದಿರಲು ತಿರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಆಗಸ್ಟ್ ಮಧ್ಯದಲ್ಲಿ ಸೋಂಕಿನ ಪ್ರಮಾಣ ದ್ವಿಗುಣ ಆಗುವ ಸಾಧ್ಯತೆ ಇದೆ. ಈಗಾಗಲೇ ಆರಂಭವಾಗಿರುವ ಕಾಲೇಜುಗಳನ್ನು ಬಂದ್ ಮಾಡುವ ಯೋಚನೆ ಕೂಡ ಆರಂಭವಾಗಿದೆ. ಹೀಗಾಗಿ ಸೋಂಕಿನ ಪ್ರಮಾಣ ಹೆಚ್ಚಾದಲ್ಲಿ ಆಗಸ್ಟ್ 23 ರಿಂದ ಹೈಸ್ಕೂಲ್ ಆರಂಭ ಅನುಮಾನವಾಗಿದೆ.

ಈಗಾಗಲೇ ಸೋಂಕಿನ ಪ್ರಮಾಣ 2 ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಪಾಸಿಟಿವಿಟಿ ದರ ಶೇ. 4.42, ಚಿಕ್ಕಮಗಳೂರಿನಲ್ಲಿ ಶೇ. 3.67, ಕೊಡಗು ಶೇ. 3.44, ಉಡುಪಿಯಲ್ಲಿ ಶೇ. 3.39, ಹಾಸನದಲ್ಲಿ ಶೇ. 2.8, ಶಿವಮೊಗ್ಗದಲ್ಲಿ ಶೇ. 2.3, ಬೆಂಗಳೂರು ಶೇ. 0.67 ಇದೆ. ಹೀಗಾಗಿ ರಾಜ್ಯದ ಹಲವೆಡೆ ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಒಟ್ಟಾರೆ ಸೋಂಕಿನ ಪ್ರಮಾಣ ಮತ್ತೆ ಹೆಚ್ಚಳ ಕಂಡರೆ ಶಾಲಾ-ಕಾಲೇಜುಗಳಿಗೆ ಪುನಃ ಆನ್​ಲೈನ್​ ವ್ಯವಸ್ಥೆ ಸಾಧ್ಯತೆ ಇದೆ. ಈಗಾಗಲೇ ಸರ್ಕಾರದ ಜತೆಗೆ ತಜ್ಞರು ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Source: Tv9 kannada