ಅಫ್ಘನ್ನಿಂದ ಪಾರಾಗಿ ಬೆಲ್ಜಿಯಂನ ವಿಮಾನ ನಿಲ್ದಾಣದಲ್ಲಿ ಇಳಿದಾಗ ಪುಟ್ಟ ಬಾಲಕಿಯ ಸಂಭ್ರಮ ನೋಡಿ
ಅಫ್ಘಾನಿಸ್ತಾನದ ಭೀಕರ ದೃಶ್ಯಗಳು ವಿಶ್ವದಾದ್ಯಂತ ಎಲ್ಲರ ಮನಕಲಕಿವೆ. ಜೀವವೊಂದು ಉಳಿದರೆ ಸಾಕು, ಬದುಕನ್ನು ಕಟ್ಟಿಕೊಳ್ಳಬಹುದು ಎಂಬ ಕಾರಣದಿಂದ ಬಹಳಷ್ಟು ಅಫ್ಘನ್ ನಾಗರಿಕರು ದೇಶವನ್ನು ತೊರೆದಿದ್ದಾರೆ. ಬಹಳಷ್ಟು ದೇಶಗಳು ಅವರನ್ನು ಸ್ವಾಗತಿಸಿವೆ. ಬೆಲ್ಜಿಯಂ ಕೂಡಾ ಅಫ್ಘನ್ ನಾಗರಿಕರನ್ ಸ್ವಾಗತಿಸಿದ್ದು, ಬೆಲ್ಜಿಯಂ ಏರ್ಪೋರ್ಟ್ನಲ್ಲಿ ಇಳಿದ ಅಫ್ಘನ್ ಕುಟುಂಬವೊದರ ಚಿತ್ರ ಈಗ ವೈರಲ್ ಅಗಿದೆ. ಇಬ್ಬರು ಮಕ್ಕಳು ಹಾಗೂ ಪೋಷಕರನ್ನೊಳಗೊಂಡ ಈ ಚಿತ್ರದಲ್ಲಿ, ಹೊಸ ನೆಲಕ್ಕೆ ಕಾಲಿಟ್ಟ ಖುಷಿಯಲ್ಲಿ ಮಗುವೊಂದು ಕುಣಿಯುತ್ತಾ ಸಾಗುತ್ತಿರುವ ಚಿತ್ರ ಬೆಲ್ಜಿಯಂ ರಾಜಕಾರಣಿಗಳಾದಿಯಾಗಿ ಎಲ್ಲರ ಮನಗೆದ್ದಿದ್ದು, ವೈರಲ್ ಆಗಿದೆ.
ರಾಯ್ಟರ್ಸ್ ಸಂಸ್ಥೆಯ ಛಾಯಾಗ್ರಾಹಕ ಜೋಹಾನ್ನ ಗೆರೋನ್ ಈ ಚಿತ್ರವನ್ನು ಮೆಲ್ಸ್ಬ್ರೊಯೇಕ್ ಮಿಲಿಟರಿ ವಿಮಾನ ನಿಲ್ದಾಣದಲ್ಲಿ ಕ್ಲಿಕ್ಕಿಸಿದ್ದಾರೆ. ಬೆಲ್ಜಿಯಂನ ಮಾಜಿ ಪ್ರಧಾನಿ ಗಾಯ್ ವರ್ಹೊಸ್ಟಾದತ್ ಈ ಚಿತ್ರವನ್ನು ಹಂಚಿಕೊಂಡಿದ್ದು, ‘ನಿರಾಶ್ರಿತರನ್ನು ಸಂರಕ್ಷಿಸಿದಾಗ ಕಾಣಸಿಗುವ ಚಿತ್ರವಿದು. ಪುಟ್ಟ ಬಾಲೆಗೆ ಬೆಲ್ಜಿಯಂಗೆ ಸ್ವಾಗತ’ ಎಂದು ಬರೆದುಕೊಂಡಿದ್ದಾರೆ.
ಅಫ್ಘನ್ನರನ್ನು ನಿರಾಶ್ರಿತರು ಎಂದು ಕರೆಯುವುದಕ್ಕಿಂತ ನಮ್ಮ ಸಹವರ್ತಿಗಳೆಂದು ಕರೆಯುವುದು ಸೂಕ್ತಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಅಮೇರಿಕಾದ ನ್ಯಾಟೋ ಹೋರಾಟಕ್ಕೆ ಅಫ್ಘನ್ ನಾಗರಿಕರೂ ಬೆಂಬಲ ಸೂಚಿಸಿದ್ದರು. ಆದ್ದರಿಂದ ಈ ಸಂದರ್ಭದಲ್ಲಿ ಅವರನ್ನು ರಕ್ಷಿಸುವುದು ಎಲ್ಲರ ಕರ್ತವ್ಯ ಎಂದು ಟ್ವಿಟಟರ್ನಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಬೆಲ್ಜಿಯಂ ಇದುವರೆಗೆ ಒಟ್ಟು 1,400 ಜನರನ್ನು ಕಾಬೂಲ್ನಿಂದ ಸ್ಥಳಾಂತರಿಸಿದೆ. ಬುಧವಾರದಂದು ಐದು ವಿಮಾನಗಳು ಕಾಬೂಲ್ ಹಾಗೂ ಇಸ್ಲಮಾಬಾದ್ನಿಂದ ಸಂಚರಿಸಿದ್ದವು. ಪ್ರಸ್ತುತ ತಾಲಿಬಾನಿಗಳು ದೇಶದ ಜನರಿಗೆ ವಿಮಾನ ನಿಲ್ದಾಣಕ್ಕೆ ತೆರಳಲು ನಿರ್ಬಂಧ ವಿಧಿಸುತ್ತಿರುವುದರಿಂದ ಕಾರ್ಯಾಚರಣೆಗೆ ಹಿನ್ನೆಡೆಯಾಗಿದೆ ಎಂದು ಮೂಲಗಳು ತಿಳಿಸಿದೆ.
Source:Tv9kannada