ಸ್ಯಾಂಡಲ್‌ವುಡ್‌ನ ದೊಡ್ಡ ಆ್ಯಕ್ಷನ್ ಡ್ರಾಮಾ ಕಥೆ ಇರುವ ಶಿವಣ್ಣ- ಪ್ರಭುದೇವ ಸಿನಿಮಾದಲ್ಲಿ ಡಾನ್ಸ್
ಹೈಲೈಟ್ಸ್:
- ಸಿನಿಮಾಗಾಗಿ ಒಂದಾಗಿದ್ದಾರೆ ಶಿವರಾಜ್ ಕುಮಾರ್ – ಪ್ರಭುದೇವ
- ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ಕಾಂಬಿನೇಶನ್ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನ
- ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ರಾಕ್‌ಲೈನ್ ವೆಂಕಟೇಶ್
ಹರೀಶ್ ಬಸವರಾಜ್
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಸೂಪರ್ ಡಾನ್ಸರ್ ಪ್ರಭುದೇವ ಕಾಂಬಿನೇಶನ್‌ನಲ್ಲಿ ಹೊಸ ಸಿನಿಮಾ ಸದ್ಯದಲ್ಲೇ ಆರಂಭವಾಗಲಿದ್ದು, ಅದರ ವಿವರಗಳು ಇಲ್ಲಿವೆ.
ವಿಕಟ ಕವಿ ಯೋಗರಾಜ್ ಭಟ್ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್ ಮತ್ತು ಪ್ರಭುದೇವ ಕಾಂಬಿನೇಶನ್‌ನಲ್ಲಿ ಸಿನಿಮಾ ಸೆಟ್ಟೇರಲಿದೆ ಎಂದು ಹಲವು ದಿನಗಳಿಂದ ಸುದ್ದಿ ಹರಿದಾಡುತ್ತಿತ್ತು. ಈಗ ಈ ಸುದ್ದಿ ಖಚಿತವಾಗಿದೆ. ಜೂ.9ರಂದು ಸಿನಿಮಾದ ಮುಹೂರ್ತ ನಡೆಯಲಿದ್ದು, ಬೆಂಗಳೂರಿನಲ್ಲಿಯೇ ಚಿತ್ರೀಕರಣ ಆರಂಭವಾಗಲಿದೆ.
ಯೋಗರಾಜ್ ಭಟ್ ಇದುವರೆಗೂ ಮಾಡಿರುವ ಸಿನಿಮಾಗಳಿಗೂ ಈ ಸಿನಿಮಾಗೂ ಅಜಗಜಾಂತರವಿದೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಬಿಗ್ ಬಜೆಟ್ ಜತೆಗೆ ದೊಡ್ಡ ನಟರ ತಂಡ ಇರುವುದರಿಂದ ಹೊಸ ರೀತಿಯ ಸಿನಿಮಾ ಇದಾಗಲಿದೆಯಂತೆ. ಈ ಸಿನಿಮಾ ಪ್ರೇಕ್ಷಕರಿಗೆ ವಿಭಿನ್ನ ಸಿನಿಮ್ಯಾಟಿಕ್ ಅನುಭವವನ್ನು ನೀಡುತ್ತದೆ.
‘ಶಿವರಾಜ್‌ಕುಮಾರ್ ಮತ್ತು ಪ್ರಭುದೇವ ಕಾಂಬಿನೇಶನ್‌ನಲ್ಲಿ ಮೂಡಿ ಬರಲಿರುವ ಸಿನಿಮಾ ಆ್ಯಕ್ಷನ್ ಡ್ರಾಮಾ ಸಬ್ಜೆಕ್ಟ್ ಹೊಂದಿದೆ. ಈಗಾಗಲೇ ಕಥೆ ಕೇಳಿ ಶಿವಣ್ಣ ಮತ್ತು ಪ್ರಭುದೇವ ಥ್ರಿಲ್ ಆಗಿದ್ದಾರೆ. ಜೂ.9ರಂದು ಮುಹೂರ್ತ ಮಾಡಿ 10ರಿಂದ ಚಿತ್ರೀಕರಣ ಆರಂಭಿಸಲು ಪ್ಲಾನ್ ಮಾಡಿದ್ದೇವೆ. ರಾಕ್‌ಲೈನ್ ವೆಂಕಟೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ಮತ್ತು ಪ್ರಭುದೇವ ಅಭಿಮಾನಿಗಳಿಗೆ ಇಷ್ಟವಾಗುವಂತಹ ಸಿನಿಮಾ ಇದು’ ಎನ್ನುತ್ತಾರೆ ನಿರ್ದೇಶಕ ಯೋಗರಾಜ್ ಭಟ್.
‘ಯೋಗರಾಜ್ ಭಟ್ಟರ ಲೈನ್ ಬಹಳ ಚೆನ್ನಾಗಿದೆ. ಪಕ್ಕಾ ಕಮರ್ಷಿಯಲ್ ಎಲಿಮೆಂಟ್ಸ್ ಇರುವ ಸಿನಿಮಾ ಇದು. ನನ್ನ ಮತ್ತು ಪ್ರಭುದೇವ ಇಬ್ಬರ ಪಾತ್ರಗಳೂ ಚೆನ್ನಾಗಿವೆ. ಬಹಳ ದಿನಗಳ ನಂತರ ರಾಕ್‌ಲೈನ್ ಅವರ ಬ್ಯಾನರ್‌ನಲ್ಲಿ ನಟಿಸುತ್ತಿದ್ದೇನೆ. ಜೂ.9ರಿಂದ ಆ ಸಿನಿಮಾದ ಕೆಲಸಗಳು ಅಧಿಕೃತವಾಗಿ ಆರಂಭವಾಗಲಿವೆ. ಟೈಟಲ್ ಇನ್ನೂ ಫೈನಲ್ ಆಗಿಲ್ಲ’ ಎಂಬುದು ಶಿವರಾಜ್‌ಕುಮಾರ್ ಅವರ ಮಾತು. ಅವರ ಕೈಯಲ್ಲಿ ಸದ್ಯ ಹರ್ಷ ನಿರ್ದೇಶನದ ‘ವೇದ’, ಶ್ರೀನಿಯ ‘ಘೋಸ್ಟ್’, ರಾಮ್ ಧೂಳಿಪುಡಿಯವರ ‘ನೀ ಸಿಗೋವರೆಗೂ’, ಸಚಿನ್ ನಿರ್ದೇಶನದ ಹೊಸ ಸಿನಿಮಾ ಹೀಗೆ ಹಲವು ಸಿನಿಮಾಗಳಿವೆ. ಇವುಗಳಲ್ಲಿ ‘ವೇದ’ ಮತ್ತು ‘ನೀ ಸಿಗೋವರೆಗೂ’ ಸಿನಿಮಾಗಳ ಒಂದಷ್ಟು ಚಿತ್ರೀಕರಣ ಮುಗಿದಿದೆ. ಬಾಕಿ ಇರುವುದನ್ನು ಸದ್ಯದಲ್ಲೇ ಮುಗಿಸಿಕೊಡಲಿದ್ದಾರೆ. ಈ ನಡುವೆ ಯೋಗರಾಜ್ ಭಟ್ಟರ ಸಿನಿಮಾವನ್ನು ಅನೌನ್ಸ್ ಮಾಡುತ್ತಿದ್ದಾರೆ. ಇದರ ಜತೆಗೆ ಮೈಸೂರಿನ ಶಕ್ತಿಧಾಮದಲ್ಲಿ ನಿರಂತರವಾಗಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು, ಅದರತ್ತಲೂ ಅವರು ಗಮನ ಹರಿಸುತ್ತಿದ್ದಾರೆ.
‘ಭಟ್ಟರು ಒಳ್ಳೆ ಕಥೆ ಮಾಡಿಕೊಂಡು ಬಂದಿದ್ದರು. ಜತೆಗೆ ಪ್ರಭುದೇವ ಕೂಡ ನಟಿಸುತ್ತಿದ್ದಾರೆ ಎಂದಾಗ ಒಪ್ಪಿಕೊಳ್ಳಲೇಬೇಕಾಯಿತು. ಎಲ್ಲದಕ್ಕೂ ಸಮಯ ಮಾಡಿಕೊಂಡು ಕೆಲಸ ಮಾಡಬೇಕು. ಜನರನ್ನು ಎಷ್ಟು ದಿನ ಆಗುತ್ತದೋ ಅಷ್ಟು ದಿನ ರಂಜಿಸುತ್ತಲೇ ಇರುತ್ತೇನೆ’ ಎನ್ನುತ್ತಾರೆ ಶಿವರಾಜ್‌ಕುಮಾರ್.
ಭಟ್ಟರ ಈ ಸಿನಿಮಾ ಮೊದಲು 60-70ರ ದಶಕದಲ್ಲಿ ನಡೆಯುವ ಕಥೆ ಎನ್ನಲಾಗಿತ್ತು. ಆದರೆ ಈಗ ಅದು ಬದಲಾಗಿದ್ದು, ಈ ಕಾಲಘಟ್ಟದಲ್ಲಿಯೇ ನಡೆಯುತ್ತದೆ. ‘ಜಯಮ್ಮನ ಮಗ’ ಸಿನಿಮಾ ನಿರ್ದೇಶಕ ವಿಕಾಸ್ ಮತ್ತು ಯೋಗರಾಜ್ ಭಟ್ ಕಥೆ ಬರೆದಿದ್ದಾರೆ. ಲವಲವಿಕೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಸ್ನೇಹಕ್ಕೆ ಸಂಬಂಧಿಸಿದ ಕಥೆ ಇದಾಗಿದ್ದು, ಡಾನ್ಸ್ ಜತೆಗೆ ಆ್ಯಕ್ಷನ್ ಭರ್ಜರಿಯಾಗಲಿರಲಿದೆ.
ಸಂತೋಷ್ ರೈ ಪಾತಾಜೆ ಸಿನಿಮಾಟೋಗ್ರಾಫರ್ ಆಗಿರಲಿದ್ದಾರೆ. ವಿ. ಹರಿಕೃಷ್ಣ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನಾಯಕಿಯರ ಆಯ್ಕೆ ಇನ್ನಷ್ಟೇ ಆಗಬೇಕಿದ್ದು, ಸದ್ಯದಲ್ಲೇ ಎಲ್ಲವೂ ಫೈನಲ್ ಆಗಲಿದೆ.
ಕಮರ್ಷಿಯಲ್ ಎಲಿಮೆಂಟ್ ಇರುವಂತಹ ಅದ್ಭುತವಾದ ಕಥೆ ಇದು. ಭಟ್ಟರ ಸ್ಟೈಲ್‌ನಲ್ಲಿದೆ. ಕಥೆ ಬಹಳ ಇಷ್ಟವಾಗಿ ನಟಿಸಲು ಒಪ್ಪಿಕೊಂಡಿದ್ದೇನೆ ಎಂದಿದ್ದಾರೆ ಶಿವರಾಜ್‌ಕುಮಾರ್
ಸ್ಯಾಂಡಲ್‌ವುಡ್‌ನ ದೊಡ್ಡ ಆ್ಯಕ್ಷನ್ ಡ್ರಾಮಾ ಕಥೆ ಈ ಚಿತ್ರದಲ್ಲಿದೆ. ಡಾನ್ಸ್ ಅಂತೂ ಯಥೇಚ್ಛವಾಗಿರಲಿದೆ. ಶಿವಣ್ಣ, ಪ್ರಭುದೇವ ಇಬ್ಬರಿಗೂ ಸಮನಾದ ಸ್ಕ್ರೀನ್ ಸ್ಪೇಸ್ ಇರುತ್ತದೆ ಎಂದು ತಿಳಿಸಿದ್ದಾರೆ ನಿರ್ದೇಶಕ ಯೋಗರಾಜ್ ಭಟ್.
source: