ತಾಳ್ಮೆಯಿದ್ದರೆ ತಾಳೆಯಿಂದ ತಿಂಗಳಿಗೆ ಲಕ್ಷ ರೂ ಆದಾಯ: ಫಲ ನೀಡುವ ಜಮೀನೇ ಒಂದು ಉದ್ಯಮ! ಏನಿದು ರೈತನ ಕರಾಮತ್ತು..

Jan 21, 2021

ಸಾಲದಲ್ಲೇ ಮುಳುಗಿದ್ದ ರೈತ ಆದಾಯಕ್ಕಾಗಿ ತಾಳೆ ಸಸಿಗಳನ್ನು ನೆಟ್ಟು ಮಾರುಕಟ್ಟೆಯಲ್ಲಿ ಉತ್ತಮ ಆದಾಯಗಳಿಸಿ ಲಾಭಗಳಿಸಿದ್ದಾರೆ. ಮಾರುಕಟ್ಟೆಯಲ್ಲಿಯೂ ಸಹ ತಾಳೆ ಹಣ್ಣಿಗೆ ಉತ್ತಮ ಬೆಲೆಯಿದೆ. ತಾಳ್ಮೆಯಿಂದ ಯೋಚಿಸಿ ರೈತ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಂಡರೆ ಆದಾಯಗಳಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ದಾವಣಗೆರೆಯ ಮರುಳಸಿದ್ದಪ್ಪ.

ದಾವಣಗೆರೆ: ಈಗಿನ ಆಧುನಿಕ ದಿನಗಳಲ್ಲಿ ಮಾರುಕಟ್ಟೆಯ ಜ್ಞಾನ ಗಳಿಸುವುದು ರೈತರಿಗೆ ಅನಿವಾರ್ಯವಾಗಿದೆ. ಕಾರಣ, ಕೃಷಿಯಲ್ಲಿ ಏನನ್ನು ಬೆಳೆದರೆ, ಬದುಕಿನಲ್ಲಿ ಬದಲಾವಣೆ ಕಾಣಬಹುದು ಎಂಬ ನಿರ್ಧಾರ ರೈತನೇ ಮಾಡಬೇಕಾಗುತ್ತದೆ. ತಾಳ್ಮೆಯಿಂದ ಆಲೋಚಿಸಿದರೆ ಆದಾಯ ಗಳಿಸಬಹುದು ಎಂಬುದಕ್ಕೆ ಇಲ್ಲೊಬ್ಬರು ಮಾದರಿಯಾಗಿದ್ದಾರೆ.

ಅನಗತ್ಯವಾಗಿ ಸಾಲ ಮಾಡಿಕೊಂಡು ಆ ಸಾಲ ತೀರಿಸಲು ಮತ್ತೊಂದು ಕಡೆ ಸಾಲ. ಈ ರೀತಿ ರೈತ ಬೇ‘ಸತ್ತಿ’ದ್ದಾನೆ. ಆದರೆ ಸಾಲದಲ್ಲೇ ಮುಳುಗಿದ್ದ ರೈತ ಈಗ ಆದಾಯಗಳಿಸುತ್ತ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳುತ್ತಿರುವ ಜೀವಂತ ನಿದರ್ಶನ ದಾವಣಗೆರೆ ತಾಲೂಕಿನ ನಾಗರಕಟ್ಟೆ ಗ್ರಾಮದ ಮರುಳಸಿದ್ದಪ್ಪರನ್ನು ಕಾಣಬಹುದು.

ಕೆಲ ಪ್ರಜ್ಞಾವಂತ ರೈತರು ತಮ್ಮ ಜಮೀನನ್ನ ಒಂದು ಉದ್ಯಮ ಎಂದು ಪರಿಗಣಿಸಿದ್ದಾರೆ. ನಿರಂತರವಾಗಿ ಆದಾಯ ಬಂದ್ರೆ ಸರ್ಕಾರಿ ನೌಕರರಿಗಿಂತ ನೆಮ್ಮದಿಯಾಗಿ ಬದುಕಬಹುದು. ಹಳ್ಳಿಯಲ್ಲಿಯೇ ಇದ್ದುಕೊಂಡು ಕೃಷಿಯ ಜೊತೆ ಪರ್ಯಾಯ ಮಾದರಿ ಅನುಸರಿಸಿದರೆ ಉತ್ತಮ ಆದಾಯಗಳಿಸಬಹುದು.

ಮರುಳಸಿದ್ದಪ್ಪ ಇತರ ರೈತರಿಗೆ ಮಾದರಿ:

ಮೊದಲು ಇವರನ್ನು ನೋಡಿ ವ್ಯಂಗ್ಯ ವಾಡಿದವರೇ ಜಾಸ್ತಿ. ವ್ಯಂಗ್ಯವಾಡಿದವರು ಈಗ ಇವರತ್ತ ಹಣ ಕೇಳಲು ಬರುವ ಪರಿಸ್ಥಿತಿ ಎದುರಾಗಿದೆ. ತೋಟಗಾರಿಕಾ ಇಲಾಖೆಯವರು ತಾಳೆ ಸಸಿಗಳನ್ನ ಉಚಿತವಾಗಿ ಕೊಡುತ್ತಾರೆ. ಜೊತೆಗೆ ಹನ್ನೆರಡು ಸಾವಿರ ರೂಪಾಯಿ ಸಹಾಯ ಧನ ಕೂಡಾ ನೀಡುತ್ತಾರೆ. ಮರುಳಸಿದ್ಧಪ್ಪ 10 ವರ್ಷದ ಹಿಂದೆ ತನ್ನ 4.5 ಎಕರೆ ಪ್ರದೇಶದಲ್ಲಿ 250 ತಾಳೆ ಗಿಡ ಹಾಕಿದ್ದರು. ಇದರ ಜೊತೆಗೆ 500 ಅಡಿಕೆ ಸಸಿಗಳನ್ನ ಹಾಕಿದ್ದರು. ನಂತರ ಅದನ್ನ ಹತ್ತು ಎಕರೆಗೆ ವಿಸ್ತಾರ ಮಾಡಿದ್ದಾರೆ.

ತಾಳೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಬೇಡಿಕೆ:

ಎಕರೆಗೆ 60 ಹಾಗೂ ಹೆಕ್ಟೇರ್​ಗೆ 143 ತಾಳೆ ಗಿಡಗಳನ್ನು ಹಾಕಬಹುದು. ಮಾರುಕಟ್ಟೆಯಲ್ಲಿ ತಾಳೆ ಹಣ್ಣಿಗೆ ಪ್ರತಿ ಕ್ವಿಂಟಾಲ್​ಗೆ 11,800ರೂ. ದರವಿದೆ. 8-10 ಟನ್ ತಾಳೆಯ ಹಣ್ಣುಗಳು ವರ್ಷಕ್ಕೆ ಮರುಳಸಿದ್ದಪ್ಪರ ಜಮೀನಿನಲ್ಲಿ ಬೆಳೆಯುತ್ತದೆ. ತಾಳೆ ಸಸಿ ಹಾಕಿದ ಮೇಲೆ ಮೂರು ವರ್ಷದ ಬಳಿ ಹಣ್ಣು ಬಿಡುತ್ತದೆ. ಐದನೇ ವರ್ಷಕ್ಕೆ ಪೂರ್ಣ ಪ್ರಮಾಣದಲ್ಲಿ ಹಣ್ಣು ಬರುತ್ತವೆ. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ತಾಳೆ ಎಣ್ಣೆ ತೆಗೆಯುವ ಕಾರ್ಖಾನೆ ಕೂಡಾ ಇದೆ. ಮಾರುಕಟ್ಟೆಯ ಚಿಂತೆ ಸಹ ಮರುಳಸಿದ್ದಪ್ಪವನರಿಗೆ ಇಲ್ಲ.

ಈ ರೀತಿಯಾಗಿ ಮರುಳಸಿದ್ದಪ್ಪ ತಮ್ಮ ಜಮೀನಿನಲ್ಲಿ ತಾಳೆ ಸಸಿಗಳನ್ನು ಬೆಳೆದು ಹಣ್ಣನ್ನು ಮಾರಾಟಮಾಡುವ ಮೂಲಕ ಆದಾಯಗಳಿಸುತ್ತ ಜೀವನ ನಡೆಸುತ್ತ ಬಂದಿದ್ದಾರೆ. ಇದೇ ರೀತಿ ರೈತರು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವುದರ ಮೂಲಕ ತಮ್ಮ ಜೀವನವನ್ನು ಸುಧಾರಿಸಿಕೊಳ್ಳಲು ಮರುಳಸಿದ್ದಪ್ಪ ಜೀವಂತ ನಿದರ್ಶನರು.

Source: TV9Kannada