ಕೊರೋನಾಗೆ 145 ಜನ ಬಲಿ: 8 ತಿಂಗಳಲ್ಲೇ ಅತಿ ಕನಿಷ್ಠ ಸಾವು!

Jan 19, 2021

ನವದೆಹಲಿ(ಜ.19): ಮಾರಕ ಕೊರೋನಾ ವೈರಸ್‌ ವಿರುದ್ಧ ಹೋರಾಡಲು ಲಸಿಕೆ ಅಭಿಯಾನ ಪ್ರಾರಂಭವಾಗಿರುವಾಗಲೇ, ದೇಶದಲ್ಲಿ ಕೊರೋನಾ ಸೋಂಕು ಹಾಗೂ ಸಾವಿನ ಪ್ರಮಾಣ ಇನ್ನಷ್ಟುತಗ್ಗಿದೆ. ಸೋಮವಾರ ಬೆಳಗ್ಗೆ 8ರವರೆಗಿನ 24 ತಾಸುಗಳ ಅವಧಿಯಲ್ಲಿ ಭಾರತದಾದ್ಯಂತ 13,788 ಹೊಸ ಪ್ರಕರಣಗಳು ಪತ್ತೆಯಾಗಿದ್ದಾರೆ, 145 ಮಂದಿ ಸಾವಿಗೀಡಾಗಿದ್ದಾರೆ.

ಹೊಸ ಸೋಂಕಿನ ಪ್ರಮಾಣ 14 ಸಾವಿರಕ್ಕಿಂತ ಕೆಳಕ್ಕೆ ಕುಸಿದಿರುವುದು ಕಳೆದ 6 ದಿನಗಳಲ್ಲಿ ಇದು ಎರಡನೇ ಬಾರಿ. ಜ.12ರಂದು ಕೇವಲ 12,548 ಪ್ರಕರಣಗಳು ದಾಖಲಾಗಿದ್ದವು. ಇನ್ನು ಸಾವಿನ ಸಂಖ್ಯೆ 145ಕ್ಕೆ ಇಳಿಕೆಯಾಗಿರುವುದು, ಕಳೆದ 8 ತಿಂಗಳಲ್ಲೇ ಕನಿಷ್ಠ ಪ್ರಮಾಣವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.

ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,05,71,773ಕ್ಕೆ ಏರಿದ್ದರೆ, ಮೃತರ ಸಂಖ್ಯೆ 1,52,419ಕ್ಕೆ ಹೆಚ್ಚಳಗೊಂಡಿದೆ. ಈವರೆಗೆ 1,02,11,342 ಮಂದಿ ಚೇತರಿಸಿಕೊಂಡಿದ್ದು, ಗುಣಮುಖ ಪ್ರಮಾಣ ಶೇ.96.59ರಷ್ಟಿದೆ.

ದೇಶದಲ್ಲಿ 2,08,012 ಸಕ್ರಿಯ ಪ್ರಕರಣಗಳು ಇದೆ. ಇದಕ್ಕೆ ಹೋಲಿಸಿದರೆ ಚೇತರಿಕೆ ಪ್ರಮಾಣ 50 ಪಟ್ಟು ಅಧಿಕವಾಗಿದೆ. ಸಕ್ರಿಯ ಪ್ರಕರಣಗಳಿಗಿಂತ 1 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಎರಡರ ನಡುವಣ ಅಂತರ 1,00,03,330ರಷ್ಟಿದೆ ಎಂದು ಹೇಳಿದೆ

Source:Suvarna News