ಕೃಷಿ ಕಾಯ್ದೆ ತಡೆ ಪ್ರಸ್ತಾವನೆಗೂ ಬಗ್ಗದ ರೈತರು!

Jan 22, 2021

ನವದೆಹಲಿ(ಜ.22): ವಿವಾದ ಇತ್ಯರ್ಥಕ್ಕಾಗಿ ನೂತನ ಕೃಷಿ ಕಾಯ್ದೆ ಜಾರಿಯನ್ನು ಒಂದೂವರೆ ವರ್ಷಗಳ ಕಾಲ ತಡೆ ಹಿಡಿಯುವುದಾಗಿ ಕೇಂದ್ರ ಸರ್ಕಾರದ ಮುಂದಿಟ್ಟಿರುವ ಪ್ರಸ್ತಾವನೆಯನ್ನೂ ರೈತ ಸಂಘಟನೆಗಳು ಗುರುವಾರ ತಿರಸ್ಕರಿಸಿದ್ದು, ಪ್ರತಿಭಟನೆಯನ್ನು ಮುಂದುವರಿಸುವ ನಿರ್ಧಾರ ಕೈಗೊಂಡಿವೆ.

ಜ.19ರಂದು ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರ ಇಂಥದ್ದೊಂದು ಪ್ರಸ್ತಾಪ ಮುಂದಿಟ್ಟಿತ್ತು. ಈ ಬಗ್ಗೆ ಗುರುವಾರ ನಡೆದ ಸಂಯುಕ್ತ ಕಿಸಾನ್‌ ಮೋರ್ಚಾದ ಸಭೆಯಲ್ಲಿ ಚರ್ಚಿಸಲಾಯಿತಾದರೂ, ಅಂತಿಮವಾಗಿ ಪ್ರಸ್ತಾಪ ತಿರಸ್ಕರಿಸಲಾಯಿತು. ಜೊತೆಗೆ ಮೂರೂ ಕೃಷಿ ಕಾಯ್ದೆ ರದ್ದು ಮಾಡುವುದೊಂದೇ ನಮ್ಮ ಬೇಡಿಕೆ ಎಂದು ರೈತರು ಸ್ಪಷ್ಟಪಡಿಸಿದರು. ಹೀಗಾಗಿ ಕಗ್ಗಂಟು ಮತ್ತೆ ಮುಂದುವರೆದಂತೆ ಆಗಿದೆ.

ಈ ನಡುವೆ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಶುಕ್ರವಾರ 11ನೇ ಸುತ್ತಿನ ಮಾತುಕತೆ ನಿಗದಿ ಆಗಿದೆ. ಹೀಗಾಗಿ ಈ ಸಭೆಯ ಫಲಶೃತಿ ಬಗ್ಗೆ ಇದೀಗ ಕುತೂಹಲ ಮೂಡಿದೆ.

Source: Suvarna News