ಕಮಲಾ ಹ್ಯಾರಿಸ್ ಪದಗ್ರಹಣ: ತಮಿಳುನಾಡಿನ ಪುಟ್ಟ ಹಳ್ಳಿಯಲ್ಲಿ ಸಂಭ್ರಮ.. ಮುರುಕು ತಯಾರಿಸಿದ ಮಹಿಳೆ!
ತಮ್ಮ ಅಂಗಡಿಯನ್ನೆಲ್ಲ ಅಲಂಕರಿಸಿ, ಅದರಲ್ಲಿ ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಫೋಟೋಗಳುಳ್ಳ ಕ್ಯಾಲೆಂಡರ್ಗಳನ್ನು ಹಾಕಿ ಸಂಭ್ರಮಿಸುತ್ತಿರುವ ಮಣಿಕಂದನ್ ಪ್ರತಿಕ್ರಿಯೆ ನೀಡಿ, ಮುಂದಿನ ನಾಲ್ಕು ವರ್ಷದಲ್ಲಿ ಕಮಲಾ ಹ್ಯಾರಿಸ್ ಭಾರತಕ್ಕೆ ಬೆಂಬಲ ನೀಡಿದರೆ ಮುಂದೆ ಅವರು ಖಂಡಿತ ಅಧ್ಯಕ್ಷರಾಗುತ್ತಾರೆ ಎಂದು ಹೇಳಿದ್ದಾರೆ.
ನಾಗಪಟ್ಟಿಣಂ: ಅಮೆರಿಕಕ್ಕೆ ಇಂದು ಐತಿಹಾಸಿಕ ದಿನ. ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸುತ್ತಿದ್ದರೆ ಅದೇ ಶುಭ ಘಳಿಗೆಯಲ್ಲಿ ಕಮಲಾ ಹ್ಯಾರಿಸ್ ಉಪಾಧ್ಯಕ್ಷ ಸ್ಥಾನಕ್ಕೆ ಏರುತ್ತಿದ್ದಾರೆ. ಕಮಲಾ ಹ್ಯಾರಿಸ್ ಅವರು ಮೂಲತಃ ತಮಿಳುನಾಡಿನವರು. ತಿರುವರೂರು ಜಿಲ್ಲೆಯ ತುಲಸೇಂದ್ರಪುರಂ ಕಮಲಾ ಹ್ಯಾರಿಸ್ರ ಮೂಲ ಗ್ರಾಮವಾಗಿದ್ದು, ಇಂದು ಇಲ್ಲಿನ ಜನರು ಭರ್ಜರಿ ಸಂಭ್ರಮದಲ್ಲಿದ್ದಾರೆ.
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದ ದಿನವೂ ತುಲಸೇಂದ್ರಪುರಂನ ಮಂದಿ ಕಮಲಾ ಹ್ಯಾರಿಸ್ ಗೆಲುವಿಗಾಗಿ ಸ್ಥಳೀಯ ಶಕ್ತಿ ದೇವತೆ ಅಯ್ಯನರ್ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದರು. ಹಾಗೇ ಇಂದೂ ಕೂಡ ಕಮಲಾ ಹ್ಯಾರಿಸ್ ಪದಗ್ರಹಣ ನಿಮಿತ್ತ ಸಂಭ್ರಮ ಪಡುತ್ತಿದ್ದಾರೆ.
ಹಳ್ಳಿಯ ಹಲವು ಜನರು ಈಗಾಗಲೇ ಮುರುಕು ಎಂಬ ಸಾಂಪ್ರದಾಯಿಕ ತಿಂಡಿಯನ್ನೂ ಮಾಡಿದ್ದಾರೆ. ಹಲವರಂತೂ ರಸ್ತೆಗಳನ್ನು ಸ್ವಚ್ಛಗೊಳಿಸಿ, ಅದರ ಮೇಲೆ ಹೂವಿನ ಮೂಲಕ ಕಮಲಾ ಹ್ಯಾರಿಸ್ ಎಂದು ಬರೆದಿದ್ದಾರೆ. ಹಾಗೇ ಕೆಲವೆಡೆ ಕಮಲಾ ಹ್ಯಾರಿಸ್ ಪೋಸ್ಟರ್ಗಳನ್ನು ಹಾಕಲಾಗಿದೆ.
ಇಂದು ಕಮಲಾ ಹ್ಯಾರಿಸ್ ಔಪಚಾರಿಕವಾಗಿ ಉಪಾಧ್ಯಕ್ಷರಾಗುತ್ತಿದ್ದಾರೆ ಎಂಬ ಕಾರಣಕ್ಕೆ ಮುರುಕು ತಿಂಡಿ (ಚಕ್ಕುಲಿ) ತಯಾರಿಸಿದ ಮಹಿಳೆ ಶಿವರಂಜಿನಿ ಅವರು ಎಎನ್ಐ ಸುದ್ದಿ ಸಂಸ್ಥೆ ಜತೆ ಮಾತನಾಡಿ, ಖುಷಿ ವ್ಯಕ್ತಪಡಿಸಿದ್ದಾರೆ. ಕಮಲಾ ದಿ ಬಗ್ಗೆ ನಮಗೆಲ್ಲ ಅತ್ಯಂತ ಸಂತೋಷವಿದೆ. ತುಂಬ ಉತ್ಸುಕತೆಯಿಂದ ಅವರ ಪದಗ್ರಹಣಕ್ಕೆ ಕಾಯುತ್ತಿದ್ದೇವೆ. ನಮ್ಮ ಹಳ್ಳಿಯ ಅನೇಕ ಮಹಿಳೆಯರಿಗೆ ಅವರೇ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ. ಇವರಂತೂ ಮುರುಕು ತಯಾರಿಸುವ ಹಿಟ್ಟಿನಲ್ಲಿ ಕಮಲಾ ಹ್ಯಾರಿಸ್ ಎಂದು ಬರೆದೇಬಿಟ್ಟಿದ್ದಾರೆ.
ಇನ್ನು ಹಳ್ಳಿಯ ಮೂಲೆಮೂಲೆಗಳೂ ಅಲಂಕಾರಗೊಂಡು, ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ಮಾತನಾಡಿದ ರಾಧಾಕೃಷ್ಣ ಎಂಬುವರು, ಕಮಲಾ ಹ್ಯಾರಿಸ್ ಮೂಲ ನಮ್ಮ ಹಳ್ಳಿ ಎಂದು ತಿಳಿದಾಗಿನಿಂದಲೂ ಅತ್ಯಂತ ಖುಷಿಯಲ್ಲಿಯೇ ಇದ್ದೇವೆ. ಅವರ ಪದಗ್ರಹಣ ಸಮಾರಂಭವನ್ನು ಹಬ್ಬದಂತೆ ಆಚರಿಸಲು ತೀರ್ಮಾನಿಸಿದ್ದೇವೆ. ಅವರ ಒಳಿತಿಗಾಗಿ ನಾನು ದೇವರ ಬಳಿ ಪ್ರಾರ್ಥಿಸುತ್ತೇನೆ. ಸದ್ಯ ನಮ್ಮ ಗ್ರಾಮವನ್ನು ಅಲಂಕಾರ ಮಾಡುವುದರಲ್ಲಿ ನಾವೆಲ್ಲ ತೊಡಗಿಕೊಂಡಿದ್ದೇವೆ ಎಂದಿದ್ದಾರೆ.
ತಮ್ಮ ಅಂಗಡಿಯನ್ನೆಲ್ಲ ಅಲಂಕರಿಸಿ, ಅದರಲ್ಲಿ ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಫೋಟೋಗಳುಳ್ಳ ಕ್ಯಾಲೆಂಡರ್ಗಳನ್ನು ಹಾಕಿ ಸಂಭ್ರಮಿಸುತ್ತಿರುವ ಮಣಿಕಂದನ್ ಪ್ರತಿಕ್ರಿಯೆ ನೀಡಿ, ಮುಂದಿನ ನಾಲ್ಕು ವರ್ಷದಲ್ಲಿ ಕಮಲಾ ಹ್ಯಾರಿಸ್ ಭಾರತಕ್ಕೆ ಬೆಂಬಲ ನೀಡಿದರೆ ಮುಂದೆ ಅವರು ಖಂಡಿತ ಅಧ್ಯಕ್ಷರಾಗುತ್ತಾರೆ ಎಂದೂ ಹೇಳಿಬಿಟ್ಟಿದ್ದಾರೆ.
Source:TV9Kannada