ಈ ಬಾರಿ ಗಣರಾಜ್ಯೋತ್ಸವಕ್ಕೆ ಅಟ್ಟಾರಿ ಗಡಿಯಲ್ಲಿ ಭಾರತ- ಪಾಕ್‌ ಸೇನೆ ಪ್ರದರ್ಶನ ಇಲ್ಲ!

Jan 19, 2021

ನವದೆಹಲಿ(ಜ.19): ಕೊರೋನಾ ಕಾರಣದಿಂದಾಗಿ ಭಾರತ-ಪಾಕಿಸ್ತಾನದ ಗಡಿ ಬಳಿಯಿರುವ ಅಟ್ಟಾರಿಯಲ್ಲಿ ಈ ಬಾರಿಯ ಗಣರಾಜ್ಯೋತ್ಸವದ ಪ್ರಯುಕ್ತ ಉಭಯ ದೇಶಗಳ ಜಂಟಿ ಸೇನಾ ಯೋಧರ ತಾಲೀಮು ಪ್ರದರ್ಶನ ನಡೆಯಲ್ಲ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಜನವರಿ 26ರ ಗಣರಾಜ್ಯೋತ್ಸವಕ್ಕೆ ಏನು ಮಾಡಬೇಕೆಂಬ ಕುರಿತಾಗಿ ಈ ವಾರ ಸಭೆ ನಿಗದಿಯಾಗಿದೆ ಎನ್ನಲಾಗಿದೆ.

ಗಣರಾಜ್ಯೋತ್ಸವದ ಪ್ರಯುಕ್ತ ಪ್ರತೀ ವರ್ಷವೂ ಪಂಜಾಬ್‌ನ ಅಟ್ಟಾರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನೆಗಳ ಜಂಟಿ ಸೇನೆಯ ಯೋಧರ ಪರೇಡ್‌ ನಡೆಯುತ್ತಿತ್ತು. ಆದರೆ ಕೊರೋನಾ ಕಾರಣದಿಂದಾಗಿ ಕಳೆದ ವರ್ಷದ ಮಾಚ್‌ರ್‍ ತಿಂಗಳಿಂದ ಅಟ್ಟಾರಿ ಗಡಿಯಲ್ಲಿ ಜನ ಸಾಮಾನ್ಯರ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ.

ರಫೇಲ್‌ ಯುದ್ಧ ವಿಮಾನದ ಶಕ್ತಿ ಪ್ರದರ್ಶನ

ಈ ಬಾರಿಯ ಜನವರಿ 26ರ ಗಣರಾಜ್ಯೋತ್ಸವದ ದಿನದಂದು ಇತ್ತೀಚೆಗಷ್ಟೇ ಭಾರತೀಯ ವಾಯುಪಡೆ ಬತ್ತಳಿಕೆಗೆ ಸೇರ್ಪಡೆಯಾಗಿರುವ ರಫೇಲ್‌ ಯುದ್ಧ ವಿಮಾನ ಪ್ರದರ್ಶನ ನೀಡಲಿದೆ. ಕೊನೆಯಲ್ಲಿ ಲಂಬಾತ್ಮಕ ರಚನೆಯ ಮೂಲಕ ತನ್ನ ಪ್ರದರ್ಶನವನ್ನು ಸಮಾಪ್ತಿಗೊಳಿಸಲಿದೆ ಎಂದು ಭಾರತೀಯ ವಾಯುಪಡೆ ಸೋಮವಾರ ತಿಳಿಸಿದೆ.

ವಿಮಾನ ಕಡಿಮೆ ಎತ್ತರದಲ್ಲಿ ಹಾರಿ ಲಂಬವಾಗಿ ಮೇಲಕ್ಕೆ ಹಾರುತ್ತದೆ. ಬಳಿಕ ಹೆಚ್ಚಿನ ಎತ್ತರದಲ್ಲಿ ಸ್ಥಿರಗೊಳ್ಳುವ ಮೊದಲು ಸುರಳಿಗಳನ್ನು ನಡೆಸುವ ಪ್ರಕ್ರಿಯೆಯನ್ನು ‘ಲಂಬ ಚಾರ್ಲಿ’ ರಚನೆ ಎನ್ನಲಾಗಿದೆ. ಗಣರಾಜ್ಯೋತ್ಸವದ ಪರೇಡ್‌ನಲ್ಲಿ ರಫೇಲ್‌ ಯುದ್ಧ ವಿಮಾನ ಸೇರಿದಂತೆ 38 ಯುದ್ಧ ವಿಮಾನಗಳು ಹಾಗೂ ನಾಲ್ಕು ವಿಮಾನಗಳು ತಮ್ಮ ಪ್ರದರ್ಶನ ನೀಡಲಿವೆ.

Source:Suvarna News