ಅಮೆರಿಕದ 46ನೇ ಅಧ್ಯಕ್ಷರಾಗಿ ಇಂದು ಜೋ ಬೈಡನ್ ಪ್ರಮಾಣ.. ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಪದಗ್ರಹಣ

Jan 20, 2021

ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿದ್ದು, ಕೊರೊನಾ ಸಾಂಕ್ರಾಮಿಕ ರೋಗದಿಂದ ಎಂದಿಗಿಂತಾ ಸರಳವಾಗಿ ಪದಗ್ರಹಣ ಸಮಾರಂಭ ನಡೆಯಲಿದೆ. ಜೊತೆಗೆ ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಕೂಡ ಇಂದು ಪ್ರಮಾಣ ಸ್ವೀಕರಿಸಲಿದ್ದಾರೆ.

ಇಂದು ಅಮೆರಿಕದಲ್ಲಿ ಸೂರ್ಯೋದಯವಾಗುತ್ತಿದ್ದಂತೆ ಮಹತ್ವದ ಸಂಕ್ರಮಣ ಸಂಭವಿಸಲಿದೆ. ಅಮೆರಿಕದ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಅಧ್ಯಕ್ಷೀಯ ಚುನಾವಣೆ ಈ ಬಾರಿ ನಡೆದಿತ್ತು. ಈ ಚುನಾವಣೆಯಲ್ಲಿ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೀನಾಯವಾಗಿ ಸೋತಿದ್ರೂ.

ಅಧ್ಯಕ್ಷ ಸ್ಥಾನದಲ್ಲಿ ಗಟ್ಟಿಯಾಗಿ ಕೂರಲು ನಡೆಸಿದ ಕಸರತ್ತುಗಳು ಒಂದೆರೆಡಲ್ಲ. ಹಲವು ಹೈಡ್ರಾಮಾಗಳ ನಡುವೆ ಇಂದು ಅಮೆರಿಕದ 46ನೇ ಅಧ್ಯಕ್ಷರಾಗಿ ಜೋಸೆಫ್ ಆರ್ ಬೈಡನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರ ಬಳಿಕ ಅಮೆರಿಕದ ಮೊದಲ ಮಹಿಳಾ ಮತ್ತು ಭಾರತೀಯ ಮೂಲದ ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಪದಗ್ರಹಣ ಮಾಡಲಿದ್ದಾರೆ.

ಭಾರತೀಯ ಕಾಲಮಾನ ರಾತ್ರಿ 8.30ಕ್ಕೆ ಅಧ್ಯಕ್ಷೀಯ ಪ್ರಮಾಣ ವಚನ ಸ್ವೀಕಾರ ಸಮಿತಿ, ಮೊಟ್ಟ ಮೊದಲ ಬಾರಿಗೆ ಯುವ ಅಮೆರಿಕನ್ನರಿಗಾಗಿ ಪ್ರಮಾಣ ಸ್ವೀಕಾರ ಸಮಾರಂಭದ ಕುರಿತು ಮಾಹಿತಿ ನೀಡಲು ಲೈವ್ ಸ್ಟ್ರೀಮ್ ನಡೆಸಲಿದೆ. ರಾತ್ರಿ 10 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಆರಂಭವಾಗಲಿದೆ.

ಖ್ಯಾತ ಪಾಪ್ ಗಾಯಕಿ ಲೇಡಿ ಗಾಗಾ ಅಮೆರಿಕದ ರಾಷ್ಟ್ರಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಜೋ ಬೈಡನ್​ಗೆ ಅಮೆರಿಕದ ಮುಖ್ಯನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಪ್ರಮಾಣ ವಚನ ಬೋಧಿಸಲಿದ್ದಾರೆ. ಬಳಿಕ ಕಮಲಾ ಹ್ಯಾರಿಸ್​ಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೋನಿಯಾ ಸೋಟೊಮೆಯರ್ ಪ್ರಮಾಣ ಬೋಧಿಸಲಿದ್ದಾರೆ.

ಪ್ರಮಾಣ ವಚನ ಸ್ವೀಕಾರಕ್ಕೆ ಗೈರಾಗಲಿದ್ದಾರೆ ಡೊನಾಲ್ಡ್ ಟ್ರಂಪ್
ಅಮೆರಿಕದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷರು ಪಾಲ್ಗೊಳ್ಳುವುದು ಹಿಂದಿನಿಂದ ರೂಢಿಸಿಕೊಂಡು ಬಂದಂತಹ ಪದ್ಧತಿ. ಆದ್ರೆ, ಈ ಬಾರಿ ಈ ಪದ್ಧತಿ ಅನುಸರಣೆಯಾಗಲ್ಲ. ಯಾಕಂದ್ರೆ, ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಕ್ರಮಕ್ಕೆ ಗೈರಾಗುತ್ತಿದ್ದಾರೆ.

150 ವರ್ಷಗಳ ಬಳಿಕ ನಿರ್ಗಮಿತ ಅಧ್ಯಕ್ಷರಿಲ್ಲದೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಈ ಹಿಂದೆ 1869ರಲ್ಲಿ ಅಂದಿನ ನಿರ್ಗಮಿತ ಅಧ್ಯಕ್ಷ ಆಂಡ್ರ್ಯೂ ಜಾನ್ಸನ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರು ಹಾಜರಾಗಿದ್ರು.

ಭದ್ರತಾ ಕೋಟೆಯಾಗಿ ಮಾರ್ಪಟ್ಟಿರೋ ಕ್ಯಾಪಿಟೋಲ್ ಹಿಲ್
ಈ ಬಾರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ದಾಳಿ ನಡೆಸೋ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಸಮಾರಂಭ ನಡೆಯೋ ಕ್ಯಾಪಿಟೋಲ್ ಹಿಲ್ ಭದ್ರತಾ ಕೋಟೆಯಾಗಿ ಮಾರ್ಪಟ್ಟಿದೆ. ಇದಕ್ಕಾಗಿ 25 ಸಾವಿರ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್​ಗಳನ್ನ ನಿಯೋಜಿಸಲಾಗಿದೆ.

ಸೇನೆಯಲ್ಲಿರೋ ಟ್ರಂಪ್ ಪರ ಮೃದು ಧೋರಣೆ ಇರುವವರು ದಾಳಿ ನಡೆಸೋ ಸಂಭವ ಇರೋದ್ರಿಂದ, ಪ್ರತಿಯೊಬ್ಬ ಭದ್ರತಾ ಸಿಬ್ಬಂದಿಯನ್ನ ಪರಿಶೀಲಿಸಿದ ಬಳಿಕವೇ ಎಫ್​ಬಿಐ ಭದ್ರತೆ ನಿಯೋಜಿಸಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 1 ಸಾವಿರ ಜನ ಪಾಲ್ಗೊಳ್ಳಲು ಅವಕಾಶ ನೀಡಿದ್ದು, ಇವರಲ್ಲಿ ಬಹುತೇಕರು ಸಂಸದರು ಮತ್ತು ಅವರ ಆಹ್ವಾನಿತರು ಭಾಗಿಯಾಗಲಿದ್ದಾರೆ. ಒಟ್ನಲ್ಲಿ ಅಮೆರಿಕದ ಇತಿಹಾಸದಲ್ಲಿ ಇಂದಿನ ಸಮಾರಂಭ ಅಚ್ಚಳಿಯದೇ ಉಳಿಯೋದು ಗ್ಯಾರಂಟಿ.

Source:TV9Kannada