Upendra Rao: ‘ಕಬ್ಜ’ ಚಿತ್ರದ ಮೋಷನ್ ಪೋಸ್ಟರ್​ನಲ್ಲಿ ಅಬ್ಬರಿಸಿದ ಉಪ್ಪಿ

Sep 18, 2021

ಆರ್​.ಚಂದ್ರು ಹಾಗೂ ಉಪೇಂದ್ರ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಕಬ್ಜ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಉಪೇಂದ್ರ ಅವರ ಜನ್ಮದಿನದ ಪ್ರಯುಕ್ತ ಅದ್ದೂರಿ ಮೋಷನ್ ಪೋಸ್ಟರ್ ಮುಖಾಂತರ ಚಿತ್ರದ ಕುರಿತ ಮಹತ್ವದ ಅಪ್ಡೇಟ್ ನೀಡುವುದಾಗಿ ನಿರ್ದೇಶಕ ಆರ್​.ಚಂದ್ರು ತಿಳಿಸಿದ್ದರು. ಅದರಂತೆ, ಆಯುಧ ಹಿಡಿದು ಅಬ್ಬರಿಸುತ್ತಿರುವ ಉಪ್ಪಿಯ ಪೋಸ್ಟರ್​ನೊಂದಿಗೆ ಚಿತ್ರದ ಕುರಿತ ಮಹತ್ವದ ಮಾಹಿತಿಗಳನ್ನೂ ಚಿತ್ರತಂಡ ನೀಡಿದೆ. ಚಿತ್ರದ ಟೀಸರ್ ದೀಪಾವಳಿಗೆ ಬಿಡುಗಡೆಯಾಗಲಿದೆ. ಹಾಗೆಯೇ ಈ ಪ್ಯಾನ್ ಇಂಡಿಯಾ ಚಿತ್ರವು 2022ರಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದೆ.

ಮೋಷನ್ ಪೋಸ್ಟರ್​ನಲ್ಲಿ ಏನೇನಿದೆ?
1980ರಲ್ಲಿ ಮಾಫಿಯಾ ಪ್ರಬಲವಾಗುವ ಕತೆಯನ್ನು ಚಿತ್ರವು ಒಳಗೊಂಡಿದೆ. ಈ ಕುರಿತಂತೆ ಪ್ರಸ್ತುತ ಬಿಡುಗಡೆಯಾಗಿರುವ ಪೋಸ್ಟರ್​ನಲ್ಲೂ ಮಾಹಿತಿ ನೀಡಲಾಗಿದೆ. ಹಾಗೆಯೇ ಚಿತ್ರದ ಅದ್ದೂರಿತನ, ಹಿನ್ನೆಲೆ, ಸಂಗೀತ, ಛಾಯಾಗ್ರಹಣ ಮೊದಲಾದವುಗಳ ಗುಣಮಟ್ಟವನ್ನು ಅಭಿಮಾನಿಗಳಿಗೆ ತಿಳಿಸುವಂತೆ ಮೋಷನ್ ಪೋಸ್ಟರ್ ಮೂಡಿಬಂದಿದೆ. ಈ ಚಿತ್ರದಲ್ಲಿ ಸುದೀಪ್ ಕೂಡ ಕಾಣಿಸಿಕೊಳ್ಳಲಿದ್ದು, ಈ ಹಿಂದೆ ಬಿಡುಗಡೆಯಾಗಿದ್ದ ಪೋಸ್ಟರ್ ಎಲ್ಲರ ಮನಸೆಳೆದಿತ್ತು. ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಲಿದ್ದಿ, ಎಜೆ ಶೆಟ್ಟಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದ್ದು, ಶ್ರೀನಿವಾಸ್ ರಾವ್ ಕೋಟ, ಪ್ರಕಾಶ್ ರಾಜ್, ಜಗಪತಿ ಬಾಬು, ಕಬೀರ್ ದುಹಾನ್ ಸಿಂಗ್ ಮೊದಲಾದವರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಆರ್​.ಚಂದ್ರಶೇಖರ್ ನಿರ್ಮಿಸುತ್ತಿದ್ದು, ಎಂಟಿಬಿ ನಾಗರಾಜ್ ಪ್ರಸ್ತುತಪಡಿಸಲಿದ್ದಾರೆ.

ಉಪೇಂದ್ರ ಅವರೊಂದಿಗೆ ಹೊಸ ಚಿತ್ರ ಘೋಷಿಸಿದ ಆರ್​ಜಿವಿ:
ಉಪೇಂದ್ರ ಅವರ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸರ್ಪ್ರೈಸ್ ಎದುರಾಗಿದೆ. ಹಿಂದಿ, ತೆಲುಗು ಚಿತ್ರರಂಗದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ಉಪೇಂದ್ರಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ಈರ್ವರ ಕಾಂಬಿನೇಷನ್​ನಲ್ಲಿ ಆಕ್ಷನ್ ಚಿತ್ರವೊಂದು ಮೂಡಿಬರಲಿದೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ. ಇದರಿಂದಾಗಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

ಇದರೊಂದಿಗೆ ಇಂದು ಉಪೇಂದ್ರ ನಿರ್ದೇಶನದ ಹೊಸ ಚಿತ್ರವೂ ಕೂಡ ಅನೌನ್ಸ್ ಆಗಲಿದೆ. ಅದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Source:tv9kannada