Tokyo Paralympics: ಪ್ಯಾರಾಲಿಂಪಿಕ್ಸ್ 2020ರಲ್ಲಿ ಎರಡನೇ ಪದಕ ಗೆದ್ದ ಚಿನ್ನದ ಹುಡುಗಿ ಅವನಿ: ಶೂಟಿಂಗ್​ನಲ್ಲಿ ಕಂಚು

Sep 3, 2021

ಟೋಕಿಯೊ ಪ್ಯಾರಾಲಿಂಪಿಕ್ 2020ರಲ್ಲಿ (Tokyo Paralympics 2020) ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಅವನಿ ಲೆಕೇರಾ ಈಗ ಮತ್ತೊಂದು ಪದಕಕ್ಕೆ ಮುತ್ತಿಕ್ಕಿದ್ದಾರೆ. ಮಹಿಳೆಯರ 50 ಮೀಟರ್​ನ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿದ್ದಾರೆ. ಅವನಿ ಶೂಟಿಂಗ್​ ಈ ಫೈನಲ್​ ಪಂದ್ಯದಲ್ಲಿ 415 ಸ್ಕೋರ್ ಮಾಡಿದರು. ಇದಕ್ಕೂ ಮುನ್ನ ಇವರು 10 ಮೀಟರ್​ನ ಏರ್​ ರೈಫಲ್ ಶೂಟಿಂಗ್​ನಲ್ಲಿ ​249.6 ಸ್ಕೋರ್ ಮಾಡಿ ವಿಶ್ವ ದಾಖಲೆ ನಿರ್ಮಿಸಿ ಚಿನ್ನ ಗೆದ್ದಿದ್ದರು.

ಈ ಮೂಲಕ ಅವನಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಸಾಧನೆ ಮಾಡಿದ್ದಾರೆ.

ಇಂದು ಭಾರತಕ್ಕೆ ಶುಭ ಶುಕ್ರವಾರ ಎಂದೇ ಹೇಳಬಹುದು. ಆರಂಭದಲ್ಲಿ ಪುರುಷರ ಹೈ ಜಂಪ್ ಟಿ64 ವಿಭಾಗದಲ್ಲಿ ಭಾರತದ ಪ್ರವೀಣ್ ಕುಮಾರ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಪ್ರವೀಣ್ ಅವರು ಹೈ ಜಂಪ್​ನಲ್ಲಿ 2.07 ಮೀಟರ್ ಜಿಗಿದು ಏಷ್ಯಾದಲ್ಲೇ ಹೊಸ ದಾಖಲೆ ನಿರ್ಮಿಸಿದ್ದಾರೆ.

ಸದ್ಯ ಅವನಿ ಮಹಿಳೆಯರ 50 ಮೀಟರ್​ನ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಹಾಲಿ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಗಳಿಕೆ 12ಕ್ಕೆ ಏರಿಕೆಯಾಗಿದ್ದು, ಈ ಪೈಕಿ 2 ಚಿನ್ನ, 6 ಬೆಳ್ಳಿ ಮತ್ತು 4 ಕಂಚಿನ ಪದಕಗಳಿವೆ.

Source:Tv9kannada