S M Krishna invited: ದಸರಾ ಉದ್ಘಾಟನೆಗಾಗಿ ಎಸ್.ಎಂ.ಕೃಷ್ಣಗೆ ಅಧಿಕೃತ ಆಹ್ವಾನ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

Oct 2, 2021

ಬೆಂಗಳೂರು: ಈ ಬಾರಿಯ ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ದಸರಾ ಉದ್ಘಾನೆಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಅಧಿಕೃತ ಆಹ್ವಾನ ನೀಡಿದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ನಿವಾಸಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿ ಆಹ್ವಾನ ಕೋರಿದರು. ಇದೇ ವೇಳೆ ಮೈಸೂರು ಜಿಲ್ಲಾಡಳಿತದಿಂದಲೂ ಅಧಿಕೃತವಾಗಿ ಎಸ್.ಎಂ. ಕೃಷ್ಣ ಅವರಿಗೆ ಆಹ್ವಾನ ನೀಡಲಾಯಿತು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್, ಕಂದಾಯ ಸಚಿವ ಆರ್. ಅಶೋಕ್, ಸಂಸದ ಪ್ರತಾಪ ಸಿಂಹ, ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಮೈಸೂರು ಡಿಸಿ ಬಗಾದಿ ಗೌತಮ್ ಈ ಸಂದರ್ಭದಲ್ಲಿ ಉಪಸ್ಥಿತಿತರಿದ್ದರು. ಎಸ್.ಎಂ. ಕೃಷ್ಣ ಅವರಿಗೆ ದಸರಾ ಆಹ್ವಾನ ಪತ್ರಿಕೆ, ಶ್ರೀಗಂಧದ ದಸರಾ ಅಂಬಾರಿ ಮೂರ್ತಿ ನೀಡಿ ಶಾಲು ಹಾರದೊಂದಿಗೆ ಅಹ್ವಾನ ಕೋರಲಾಯಿತು.

ಎಸ್.ಎಂ. ಕೃಷ್ಣ ಅವರಿಗೆ ಆಭಾರಿ: ಸಿಎಂ ಬೊಮ್ಮಾಯಿ
ದಸರಾ ಉದ್ಘಾಟನೆಗೆ S.M.ಕೃಷ್ಣರನ್ನು ಆಹ್ವಾನಿಸಿದ್ದೇವೆ. ಕನ್ನಡಿಗರಿಗೆ ಪ್ರೀತಿಯ ವ್ಯಕ್ತಿ ಇವರು, ನಮಗೆಲ್ಲಾ ಆದರಣೀಯ. ಎಸ್.ಎಂ.ಕೃಷ್ಣ ನಮ್ಮ ಆಮಂತ್ರಣ ಒಪ್ಪಿಕೊಂಡಿದ್ದಾರೆ. ಎಸ್.ಎಂ.ಕೃಷ್ಣ ಒಬ್ಬ ಮುತ್ಸದ್ಧಿ ರಾಜಕಾರಣಿ. ಹೀಗಾಗಿ ನಾವು ಅವರಿಗೆ ಆಭಾರಿಯಾಗಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಮೈಸೂರು ದಸರಾ ಉದ್ಘಾಟನೆ ಹೊಣೆ ಹೊರಿಸಿದ್ದಾರೆ; ಅವಕಾಶ ನೀಡಿದ್ದಕ್ಕೆ ಅಭಿನಂದನೆ:
ಮೈಸೂರು ದಸರಾ ಉದ್ಘಾಟನೆ ಹೊಣೆ ಹೊರಿಸಿದ್ದಾರೆ. ದಸರಾ ಉದ್ಘಾಟಿಸಲು ಅವಕಾಶ ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸುವೆ ಎಂದು ರಾಜ್ಯ ಸರ್ಕಾರಕ್ಕೆ ಎಸ್.ಎಂ.ಕೃಷ್ಣ ಹೇಳಿದರು. ಸಿಎಂ ಬೊಮ್ಮಾಯಿ ಉತ್ತಮ ಆಡಳಿತವನ್ನು ಕೊಡ್ತಿದ್ದಾರೆ ಎಂದೂ ಸಿಎಂ ಬಸವರಾಜ ಬೊಮ್ಮಾಯಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

ನನ್ನ ವ್ಯಕ್ತಿತ್ವ ಪೋಷಣೆ, ರೂಪಿಸಿಕೊಳ್ಳಲು ಮೈಸೂರು ಮತ್ತು ಅಲ್ಲಿನ ರಾಮಕೃಷ್ಣ ಆಶ್ರಮ ಬಹಳ ಸಹಕಾರಿಯಾಗಿವೆ ಎಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ತಿಳಿಸಿದರು.

Source:tv9Kannada