IPL 2022: ಐಪಿಎಲ್ ಹೊಸ ತಂಡಗಳಿಗೆ ಮೂಲ ಬೆಲೆ ಫಿಕ್ಸ್​: ಇಷ್ಟು ಮೊತ್ತ ನೀಡಿ ಖರೀದಿಸುವವರು ಯಾರು?

Aug 31, 2021

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಇದೀಗ ಐಪಿಎಲ್ 2022ರ ಮೂಲಕ ತನ್ನ ಆದಾಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿದೆ. ಈ ಹಿಂದೆ ಬಿಸಿಸಿಐ ಸ್ಪಷ್ಟಪಡಿಸಿದಂತೆ ಐಪಿಎಲ್​ನ 15ನೇ ಸೀಸನ್​ನಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿವೆ. ಪ್ರಸ್ತುತ ಇರುವ 8 ತಂಡಗಳ ಜೊತೆಗೆ ಇನ್ನೆರೆಡು ತಂಡಗಳ ಸೇರ್ಪಡೆಯಾಗಲಿದ್ದು, ಆ ತಂಡಗಳ ಬಿಡ್ಡಿಂಗ್​ಗಾಗಿ ಬಿಸಿಸಿಐ ರೂಪುರೇಷೆ ಸಿದ್ಧಪಡಿಸಿದೆ.

ಅದರಂತೆ ಇತ್ತೀಚೆಗೆ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಹೊಸ ಹರಾಜು ಪ್ರಕ್ರಿಯೆಯ ರೂಪುರೇಷೆಗಳನ್ನು ಅಂತಿಮಗೊಳಿಸಲಾಗಿದೆ. ಬಿಸಿಸಿಐ ಮೂಲಗಳ ಪ್ರಕಾರ, ಯಾವುದೇ ಕಂಪನಿಯು 75 ಕೋಟಿ ರೂ. ಪಾವತಿಸುವ ಮೂಲಕ ಬಿಡ್ಡಿಂಗ್ ದಾಖಲೆಗಳನ್ನು ಖರೀದಿಸಬಹುದು.

ಆದರೆ ಇಲ್ಲಿ ತಂಡಗಳ ಮೂಲ ಬೆಲೆಯನ್ನೂ ಕೂಡ ಗಮನಿಸಬೇಕಾಗುತ್ತದೆ. ಈ ಹಿಂದೆ ಬಿಸಿಸಿಐ ಹೊಸ ತಂಡಗಳ ಮೂಲ ಬೆಲೆಯನ್ನು 1700 ಕೋಟಿ ರೂ.ಗೆ ನಿಗದಿಪಡಿಸಲು ಮುಂದಾಗಿತ್ತು. ಆದರೆ ಇತ್ತೀಚೆಗೆ ನಡೆದ ಸಭೆಯಲ್ಲಿ ಮೂಲ ಬೆಲೆಯನ್ನು 2000 ಕೋಟಿ ಮಾಡಲು ನಿರ್ಧರಿಸಲಾಗಿದೆ. ಆ ಮೂಲಕ ಎರಡು ತಂಡಗಳ ಹರಾಜಿನಿಂದ ಬರೋಬ್ಬರಿ 5 ಸಾವಿರ ಕೋಟಿ ಆದಾಯಗಳಿಸುವ ಇರಾದೆಯಲ್ಲಿದೆ ಬಿಸಿಸಿಐ.

ಕಾರ, ವಾರ್ಷಿಕ 3000 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳಿಗೆ ಮಾತ್ರ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿರಲಿದೆ. ಪಿಟಿಐ ಮೂಲಗಳ ಪ್ರಕಾರ, ಐಪಿಎಲ್ 2022 ಗೆ ಸೇರುವ 2 ಹೊಸ ತಂಡಗಳ ಪಟ್ಟಿಯಲ್ಲಿ ಅಹ್ಮದಾಬಾದ್, ಲಕ್ನೋ ಮತ್ತು ಪುಣೆ ಹೆಸರುಗಳು ಮುಂಚೂಣಿಯಲ್ಲಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಮತ್ತು ಲಕ್ನೋದ ಏಕನಾ ಕ್ರೀಡಾಂಗಣವು ವೀಕ್ಷಕರ ಸಾಮರ್ಥ್ಯದಿಂದಾಗಿ ಫ್ರಾಂಚೈಸಿಗಳ ಮೊದಲ ಆಯ್ಕೆಯಾಗಿದೆ. ಹಾಗೆಯೇ ಪುಣೆ ಕ್ರಿಕೆಟ್ ಸ್ಟೇಡಿಯಂ ಮೂಲಕ ಹೊಸ ತಂಡವನ್ನು ಪರಿಚಯಿಸಲು ಕೂಡ ಕೆಲ ಉದ್ಯಮಿಗಳು ಆಸಕ್ತಿ ಹೊಂದಿದ್ದಾರೆ. ಅದರಂತೆ ಈ ಮೂರು ನಗರಗಳಿಂದ ಎರಡು ಹೊಸ ಫ್ರಾಂಚೈಸಿ ಪರಿಚಯವಾಗಲಿದೆ.

ಇನ್ನು ತಂಡಗಳ ಖರೀದಿಗಾಗಿ ಅದಾನಿ ಗ್ರೂಪ್, ಆರ್​ಪಿ ಸಂಜೀವ್ ಗೊಯೆಂಕಾ ಗ್ರೂಪ್, ಫಾರ್ಮಾ ಕಂಪನಿ ಟುರೆಟ್ ಮತ್ತು ಬ್ಯಾಂಕಿಂಗ್ ವಲಯದ ಕಂಪನಿಗಳು ಆಸಕ್ತಿ ಹೊಂದಿವೆ ಎಂದು ತಿಳಿದು ಬಂದಿದೆ. ಹೀಗಾಗಿ ಎರಡು ಹೊಸ ತಂಡಗಳಿಗಾಗಿ ಬಿಡ್ಡಿಂಗ್​ನಲ್ಲೂ ಭರ್ಜರಿ ಪೈಪೋಟಿ ಕಂಡು ಬರುವ ನಿರೀಕ್ಷೆಯಿದೆ.

Source:Tv9kannada