IPL 2021: ‘ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ನೋಡೇ ಐಪಿಎಲ್ ಲೋಗೋ ಡಿಸೈನ್ ಮಾಡಿದ್ದು’

Apr 10, 2021

ಇಂದು ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸವಾಲೊಡ್ಡಲಿದೆ. ಈ ನಡುವೆ, ನಿನ್ನೆಯ ಪಂದ್ಯಾಟದ ಎಬಿಡಿ ಆಟ ಗಮನಿಸಿ, ವೀರೇಂದ್ರ ಸೆಹವಾಗ್ ವಿಶೇಷ ಟ್ವೀಟ್ ಒಂದನ್ನು ಮಾಡಿದ್ದಾರೆ.

ಎಬಿ ಡಿವಿಲಿಯರ್ಸ್ ಕ್ರಿಕೆಟ್ ಲೋಕದ ದಂತಕಥೆ ಅನ್ನೋದನ್ನು ಎಲ್ಲಾ ಕ್ರಿಕೆಟ್ ಅಭಿಮಾನಿಗಳೂ ಒಪ್ಪಿಕೊಳ್ಳುತ್ತಾರೆ. ದೇಶ, ಭಾಷೆ ಹೊರತುಪಡಿಸಿ ಅವರಿಗೆ ಅತಿ ದೊಡ್ಡ ಅಭಿಮಾನಿ ಸಮೂಹವಿದೆ. ಮಿಸ್ಟರ್ 360 ಎಂದು ಕರೆಸಿಕೊಳ್ಳುವ ಎಬಿಡಿ ಆಟವನ್ನು ಎಂಜಾಯ್ ಮಾಡದವರು ಯಾರೂ ಇರಲಿಕ್ಕಿಲ್ಲ. ಎಂತಹುದೇ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲ ಚಾಕಚಕ್ಯತೆ ಡಿವಿಲಿಯರ್ಸ್​ಗೆ ಇದೆ. ಇದೇ ರೀತಿ ಯಾವುದೇ ಎಸೆತಗಾರರ ಬಾಲ್​ನ್ನು ಅಟ್ಟಾಡಿಸಬಲ್ಲ, ಮೊದಲ ಬಾಲ್​ಗೆ ಫೋರ್-ಸಿಕ್ಸ್ ಬಾರಿಸಬಲ್ಲ ಮತ್ತೊಬ್ಬ ಸೂಪರ್ ದಾಂಡಿಗನಿದ್ದರೆ ಅದು ವೀರೂ.. ವೀರೇಂದ್ರ ಸೆಹವಾಗ್.

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದೊಂದಿಗೆ ಐಪಿಎಲ್ ಕ್ರಿಕೆಟ್ ಜ್ವರ ಶುರುವಾಗಿದೆ. ಇಂದು ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸವಾಲೊಡ್ಡಲಿದೆ. ಈ ನಡುವೆ, ನಿನ್ನೆಯ ಪಂದ್ಯಾಟದ ಎಬಿಡಿ ಆಟ ಗಮನಿಸಿ, ವೀರೇಂದ್ರ ಸೆಹವಾಗ್ ವಿಶೇಷ ಟ್ವೀಟ್ ಒಂದನ್ನು ಮಾಡಿದ್ದಾರೆ.

ಭಾರತೀಯ ತಂಡ ಕಂಡ ಅಬ್ಬರದ ಬ್ಯಾಟ್ಸ್​ಮನ್ ವೀರೇಂದ್ರ ಸೆಹವಾಗ್, ಡಿವಿಲಿಯರ್ಸ್​ರನ್ನು ಸ್ಪೆಷಲ್ ಆಗಿ ಕೊಂಡಾಡಿದ್ದಾರೆ. ಈ ಐಪಿಎಲ್ ಲೋಗೋವನ್ನು ಡಿವಿಲಿಯರ್ಸ್ ಬ್ಯಾಟಿಂಗ್ ನೋಡಿಯೇ ತಯಾರಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ, ನಿನ್ನೆಯ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿದ್ದಕ್ಕಾಗಿ ಹರ್ಷಲ್ ಪಟೇಲ್​ರನ್ನೂ ಅಭಿನಂದಿಸಿದ್ದಾರೆ.

 

ನಿನ್ನೆ ಮುಂಬೈ ವಿರುದ್ಧ ಸಿಡಿದಿದ್ದ ಡಿವಿಲಿಯರ್ಸ್
ಮುಂಬೈ ನಿಡಿದ 160 ರನ್​ಗಳ ಟಾರ್ಗೆಟನ್ನು ಬೆನ್ನಟ್ಟಿದ್ದ ಆರ್​ಸಿಬಿಯ ಆರಂಭ ಅಷ್ಟು ಉತ್ತಮವಾಗಿರಲಿಲ್ಲ. ಆರಂಭಿಕನಾಗಿ ಬಂದ ಸುಂದರ್ 10 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರು. ನಂತರ ಬಂದ ರಜತ್​ ಕೂಡ ಹೆಚ್ಚು ಸಮಯ ನಿಲ್ಲಲಿಲ್ಲ. ಕೊಹ್ಲಿ ಜೊತೆಗೂಡಿದ ಮ್ಯಾಕ್ಸ್​​ವೆಲ್ ಉತ್ತಮ ಆಟ ಆಡಿದರು. 28 ಎಸೆತ ಎದುರಿಸಿದ ಮ್ಯಾಕ್ಸ್​ವೆಲ್ 39 ರನ್ ಗಳಿಸಿದ್ದರು. ಇದರಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದ್ದವು.

ಉತ್ತಮ ಜೊತೆಯಾಟ ಆಡುತ್ತಿದ್ದ ಕೊಹ್ಲಿ 33 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಡಿವಿಲಿಯರ್ಸ್​ ತಮ್ಮ ಎಂದಿನ ಆಟಕ್ಕೆ ಮುಂದಾದರು. ಒಂದು ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಮ್ಯಾಕ್ಸ್​ವೆಲ್ ಇಲ್ಲದ ಹೊಡೆತ ಆಡಲು ಹೋಗಿ ಔಟಾದರು. ಈ ವಿಕೆಟ್ ಬಳಿಕ ಏಕಾಂಗಿ ಹೋರಾಟ ನಡೆಸಿದ ಡಿವಿಲಿಯರ್ಸ್​ ತಂಡವನ್ನು ಗೆಲುವಿನ ಅಂಚಿಗೆ ತಂದು ರನ್​ ಔಟ್​ ಆದರು. ವಿಕೆಟ್​ಗೂ ಮುನ್ನ ಡಿವಿಲಿಯರ್ಸ್​ ಕೇವಲ 27 ಬಾಲ್​ಗಳಲ್ಲಿ 48 ರನ್​ ಗಳಿಸಿದ್ದರು. ಅಂತಿಮವಾಗಿ ಬೌಲಿಂಗ್​ನಲ್ಲಿ ಮಿಂಚಿದ್ದ ಹರ್ಷಲ್ ಪಟೇಲ್ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ ಆರ್​ಸಿಬಿಗೆ ಗೆಲುವಿನ ಮಾಲೆ ತೊಡಿಸಿದರು.

Source: TV9Kannada