`ರೋಬೋ ಸುಂದರಿ’

Feb 15, 2022

ಮೈಸೂರು, ಫೆ.14(ಎಸ್‍ಬಿಡಿ)– ಹೋಟೆಲ್‍ಗಳಲ್ಲಿ ಗ್ರಾಹಕರಿಗೆ ಸೇವೆ ನೀಡುವ `ರೋಬೋ ಸುಂದರಿ’ ಸಾಂಸ್ಕøತಿಕ ನಗರಿ ಮೈಸೂ ರಿಗೆ ಕಾಲಿಟ್ಟಿದ್ದಾಳೆ. ಮೈಸೂರಿನ ಜಯಚಾಮರಾಜೇಂದ್ರ ವೃತ್ತ (ಹಾರ್ಡಿಂಜ್ ಸರ್ಕಲ್)ದ ಬಳಿಯ `ಸಿದ್ಧಾರ್ಥ ಹೋಟೆಲ್’ಗೆ ಸೋಮವಾರ ದೆಹಲಿಯಿಂದ ಆಗಮಿಸಿರುವ `ರೋಬೋ ಸುಂದರಿ’, ರೆಸ್ಟೋರೆಂಟ್‍ನಲ್ಲಿ ಮಂಗಳವಾರದಿಂದ ಗ್ರಾಹಕರ ಸೇವೆಗೆ ಸಜ್ಜಾಗಿದ್ದಾಳೆ. ಶಿವಮೊಗ್ಗ ಸೇರಿದಂತೆ ಕೆಲವೇ ನಗರ ಗಳಲ್ಲಿ ಈ `ರೋಬೋಟ್’ ಸೇವೆ ಇದ್ದು, ಇನ್ನು ಮುಂದೆ ನಮ್ಮ ಮೈಸೂರಿನಲ್ಲೂ ರೋಬೋಟ್ ಸೇವೆ ಲಭ್ಯವಿದೆ.

ಮೈಸೂರಲ್ಲಿ ಮೊದಲು: ಎಲ್ಲಾ ಉದ್ಯಮಗಳಲ್ಲೂ ಸ್ಪರ್ಧೆ ಇದ್ದೇ ಇದೆ. ಹಾಗೆಯೇ ಹೋಟೆಲ್ ಉದ್ಯಮದಲ್ಲೂ ಗ್ರಾಹಕರ ಸೆಳೆ ಯುವ ನಿಟ್ಟಿನಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿರುತ್ತವೆ. ರೆಸ್ಟೋರೆಂಟ್‍ಗಳಲ್ಲಿ ಗ್ರಾಹಕರಿಗೆ ಸರ್ವ್ ಮಾಡುವ ರೋಬೋಟ್ ಗಳು, ಚೆನ್ನೈ, ಹೈದರಾಬಾದ್, ಶಿವಮೊಗ್ಗ ಹೀಗೆ ದೇಶದ ಕೆಲವೇ ನಗರಗಳಲ್ಲಿ ಕಾಣಸಿಗುತ್ತವೆ. ಆದರೆ ಮೈಸೂರಿನ ಹೋಟೆಲ್ ಉದ್ಯಮದಲ್ಲಿ ಇದು ಮೊದಲ ಪ್ರಯತ್ನವಾಗಿದೆ. ಸಿದ್ಧಾರ್ಥ ಹೋಟೆಲ್ ನಲ್ಲಿ ರೋಬೋಟ್ ಸೇವೆಯ ಮೂಲಕ ಗ್ರಾಹಕರ ಸೇವೆಯಲ್ಲಿ ಹೊಸತನ್ನು ಪರಿಚಯಿಸಲಾಗಿದೆ. ದೆಹಲಿಯಿಂದ ತರಿಸಿರುವ ಮಹಿಳೆ ರೂಪದ ರೋಬೋಟ್ ಇಂದು ಪ್ರಾಯೋಗಿಕವಾಗಿ ಸೇವೆ ನೀಡಿದ್ದು, ಮಂಗಳವಾರದಿಂದ ಗ್ರಾಹಕರ ಸೇವೆಗೆ ಸಜ್ಜಾಗಿದೆ.

ರೋಬೋ ಬಗ್ಗೆ: ಇದು ಬ್ಯಾಟರಿ ಚಾಲಿತ ರೋಬೋಟ್. 4 ಗಂಟೆಗಳ ಕಾಲ ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ, ಸುಮಾರು 8 ಗಂಟೆಗಳ ಕಾಲ ರೋಬೋ ಕಾರ್ಯ ನಿರ್ವಹಿಸಲಿದೆ. ಮಾನವ ಆದೇಶ(ಹ್ಯೂಮನ್ ಕಮಾಂಡ್)ದಂತೆ ಈ ರೋಬೋ ಕೆಲಸ ಮಾಡುತ್ತದೆ. ಇದರ ಸಂಚಾರಕ್ಕಾಗಿಯೇ ಅಡುಗೆ ಕೋಣೆ ಬಳಿಯಿಂದ ಗ್ರಾಹಕರು ಕೂರುವ ಪ್ರತಿ ಟೇಬಲ್‍ವರೆಗೆ ಕಾಂತೀಯ ಪಟ್ಟಿ(ಮ್ಯಾಗ್ನೆಟಿಕ್ ಸ್ಟ್ರೈಪ್) ಅಳವಡಿಸ ಲಾಗಿದೆ. ದೆಹಲಿಯಲ್ಲೇ ಪ್ರೋಗ್ರಾಮಿಂಗ್ ಮಾಡಲಾಗಿದ್ದು, ಇಲ್ಲಿ ಸಮರ್ಪಕವಾಗಿ ಸಂರಚನೆ ಮಾಡಿ, ಸೇವೆಗೆ ಸಜ್ಜುಗೊಳಿಸಲಾಗಿದೆ. ಗರಿಷ್ಠ 10 ಕೆಜಿಯಷ್ಟು ವಸ್ತುಗಳನ್ನಿಟ್ಟರೂ ನಿರಾಯಾಸವಾಗಿ ಸೂಚಿತ ಸ್ಥಳಕ್ಕೆ ತಲುಪಿಸುತ್ತದೆ. ಧ್ವನಿ ನಿರ್ದೇಶನ(ವಾಯ್ಸ್ ಕಮಾಂಡರ್) ದಂತೆ ಸೆನ್ಸಾರ್ ಆಧಾರದಲ್ಲಿ ರೋಬೋ ಸಂಚರಿಸಿ, ಗ್ರಾಹಕರಿಗೆ ಸೇವೆ ನೀಡಲಿದೆ. ಗ್ರಾಹಕರು ಆರ್ಡರ್ ಮಾಡಿದ ತಿಂಡಿ-ತಿನಿಸನ್ನು ನಿರ್ಧಿಷ್ಟ ಟೇಬಲ್ ಬಳಿಗೆ ತಲುಪಿಸು ವುದು ಮಾತ್ರವಲ್ಲದೆ ಅನೇಕ ವಿಶೇಷತೆಗಳನ್ನು ಈ ರೋಬೋಟ್ ಒಳಗೊಂಡಿದೆ.

ಕಿಚನ್-ಟೇಬಲ್: ಈ ರೋಬೋ ಬಹುತೇಕ ಕಾರ್ಮಿಕರಂತೆಯೇ ಕಾರ್ಯ ನಿರ್ವ ಹಿಸಲಿದೆ. ಗ್ರಾಹಕರು ಆರ್ಡರ್ ಮಾಡಿದ ತಿಂಡಿಯನ್ನು ಸಿದ್ದಗೊಳಿಸಿ, ರೋಬೋಟ್ ಕೈಯ್ಯಲ್ಲಿ ಅಳವಡಿಸಲಾಗಿರುವ ತಟ್ಟೆ(ಟ್ರೇ)ಯ ಮೇಲೆ ಇಟ್ಟು, ಟೇಬಲ್ ಸಂಖ್ಯೆಯನ್ನು ತಿಳಿಸಿದರೆ ಕಾಂತೀಯ ಪಟ್ಟಿ ಮೇಲೆ ಸಾಗಿ ನಿರ್ಧಿಷ್ಟ ಟೇಬಲ್ ಬಳಿ ನಿಂತುಕೊಳ್ಳುತ್ತದೆ. ಗ್ರಾಹಕರು ಟ್ರೇ ಮೇಲಿರುವ ತಿಂಡಿ ತಿನಿಸನ್ನು ತೆಗೆದುಕೊಂಡ ನಂತರ, ರೋಬೋ ನಿಗದಿತ ಸ್ಥಳಕ್ಕೆ ವಾಪಸ್ಸಾಗುತ್ತದೆ. ಟೇಬಲ್ ಸ್ವಚ್ಛಗೊಳಿಸುವಾಗಲೂ ರೋಬೋ ನೆರವಾಗುತ್ತದೆ. ಅಲ್ಲಿದ್ದ ಪ್ಲೇಟ್, ತಟ್ಟೆ, ಲೋಟಗಳನ್ನು ರೋಬೋ ಟ್ರೇ ಮೇಲಿಟ್ಟು ಆದೇಶ ನೀಡಿದರೆ ವಾಷಿಂಗ್ ಪ್ರದೇಶದ ಬಳಿ ಹೋಗಿ ನಿಲ್ಲುತ್ತದೆ. ಅಲ್ಲಿರುವ ಕಾರ್ಮಿಕರು ಅವುಗಳನ್ನು ತೆಗೆದುಕೊಂಡು ಸ್ವಚ್ಛಗೊಳಿಸುತ್ತಾರೆ. ಸಿದ್ಧಾರ್ಥ ಹೋಟೆಲ್‍ನಲ್ಲಿರುವುದು ಧ್ವನಿ ಆದೇಶದ ಆಧಾರದಲ್ಲಿ ಕಾರ್ಯನಿರ್ವಹಿಸುವ ರೋಬೋ. ಆದರೆ ರಿಮೋಟ್ ಮೂಲಕ ನಿಯಂ ತ್ರಿಸುವ, ಐಪ್ಯಾಡ್ ಮೂಲಕ ಆರ್ಡರ್ ಪಡೆಯುವ ರೋಬೋಗಳೂ ಇವೆ. ಅಲ್ಲದೆ ಗ್ರಾಹಕರು ಬಂದಾಕ್ಷಣ ನೀರು ನೀಡಿ, ಗುಡ್ ಮಾನಿರ್ಂಗ್, ಗುಡ್ ಈವ್ನಿಂಗ್ ಹೇಳುವ ಮೂಲಕ ಆರ್ಡರ್ ಕೇಳುವಂತೆ ಧ್ವನಿ ಅಡಕಗೊಳಿಸುವ ಆಯ್ಕೆಯೂ ಇವುಗಳಲ್ಲಿ ಇರುತ್ತದೆ.

ಮತ್ತಷ್ಟು ವಿಶೇಷತೆ: ನಿರ್ಧಿಷ್ಟ ಟೇಬಲ್‍ಗೆ ತಿಂಡಿ ತಿನಿಸನ್ನು ಸರ್ವ್ ಮಾಡುವುದರ ಜೊತೆಗೆ ಈ ರೋಬೋ ಮತ್ತಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಹೋಟೆಲ್‍ನಲ್ಲಿರುವ ಕೊಠಡಿಗಳ ಸಂಖ್ಯೆ, ರೆಸ್ಟೋರೆಂಟ್‍ನಲ್ಲಿ ಲಭ್ಯವಿರುವ ತಿಂಡಿ-ಊಟದ ಮೆನು ಸೇರಿ ದಂತೆ ಇನ್ನಿತರ ಸೌಲಭ್ಯಗಳು. ಸುತ್ತಮುತ್ತಲಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳು, ಇಲ್ಲಿಂದ ಎಷ್ಟು ದೂರವಾಗುತ್ತದೆ. ಮೈಸೂರಿನ ಸಂಕ್ಷಿಪ್ತ ಇತಿಹಾಸ, ಪ್ರವಾಸಿ ತಾಣಗಳು, ಬಸ್, ರೈಲು ನಿಲ್ದಾಣಕ್ಕಿರುವ ಅಂತರ ಹೀಗೆ ಎಲ್ಲಾ ರೀತಿಯ ಮಾಹಿತಿಯನ್ನೂ ಈ ರೋಬೋದಲ್ಲಿ ದಾಖಲಿಸಬಹುದು. ಟೇಬಲ್‍ನಲ್ಲಿ ಗ್ರಾಹಕರು ಕುಳಿತಾಕ್ಷಣ ನೀರಿನ ಲೋಟಗಳೊಂದಿಗೆ ರೋಬೋ ಆಗಮಿಸುತ್ತದೆ. ಮೆನು ಬಗ್ಗೆ ಕೇಳಿದರೆ ಅಂದು ರೆಸ್ಟೋರೆಂಟ್‍ನ ವಿಶೇಷ ತಿಂಡಿ ಸೇರಿದಂತೆ ಲಭ್ಯವಿರುವ ಎಲ್ಲಾ ತಿಂಡಿ-ತಿನಿಸಿನ ಹೆಸರು ಹೇಳುತ್ತದೆ. ಹೋಟೆಲ್ ಬಗ್ಗೆ, ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಕೇಳಿದರೂ ಸಂಪೂರ್ಣ ವಿವರ ನೀಡುತ್ತದೆ. ಇನ್ನೂ ಹಲವು ಫೀಚರ್‍ಗಳಿದ್ದು, ಹಂತಹಂತವಾಗಿ ಅಪ್ಡೇಟ್ ಮಾಡಲಾಗುವುದು. ಸದ್ಯ 20 ಟೇಬಲ್‍ಗಳಿಗೆ ರೋಬೋ ಸೇವೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಗ್ರಾಹಕರಿಂದ ನಾವೇ ಆರ್ಡರ್ ತೆಗೆದುಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಸೇವೆಯನ್ನು ವಿಸ್ತರಿಸಲಾಗುವುದು ಎಂದು ರೋಬೊಟಿಕ್ ಇಂಜಿನಿಯರ್ ತಿಳಿಸಿದ್ದಾರೆ.

ವಿದೇಶಗಳಲ್ಲಿ ರೋಬೋಟ್ ಥೀಮ್ ರೆಸ್ಟೋರೆಂಟ್‍ಗಳು ಸಾಮಾನ್ಯವಾಗಿವೆ. ಆದರೆ ಭಾರತದಲ್ಲಿ ಇತ್ತೀಚೆಗೆ ಕೆಲವೊಂದು ನಗರಗಳಲ್ಲಿ ಕಾಣಸಿಗುತ್ತಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಯುವಕರು ಆರಂಭಿಸಿದ್ದ ರೆಸ್ಟೋರೆಂಟ್‍ನಲ್ಲಿ ರೋಬೋಟ್ ಪರಿ ಚಯಿಸಿದ್ದರು. ಶಿವಮೊಗ್ಗ ನಗರದ `ಉಪಹಾರ ದರ್ಶಿನಿ’ ಹೋಟೆಲ್‍ನಲ್ಲೂ ರೋಬೋ ಸೇವೆ ಕಲ್ಪಿಸಿದ್ದು ವರದಿಯಾಗಿತ್ತು. ಇದೀಗ ಮೈಸೂರಿಗೂ ರೋಬೋ ಕಾಲಿಟ್ಟಿದ್ದು, ಈ ಮೂಲಕ ಮೈಸೂರಿನ ಸಿದ್ಧಾರ್ಥ ಹೋಟೆಲ್ ಮಾಲೀಕರು ಉದ್ಯಮ ದಲ್ಲೊಂದು ಬದಲಾವಣೆಯ ಹೆಜ್ಜೆ ಇಟ್ಟಿದ್ದಾರೆ. 2.50 ಲಕ್ಷ ರೂ. ಬೆಲೆಯ ರೋಬೋ ತರಿಸಿ, ಗ್ರಾಹಕರ ಸೇವೆಯಲ್ಲಿ ನವೀನತೆ ತಂದಿದ್ದಾರೆ.

Source: mysoremithra