ನಾನೊಬ್ಬ ಭಾರತೀಯ ಮುಸಲ್ಮಾನ ಎನ್ನಲು ಹೆಮ್ಮೆಯಾಗುತ್ತೆ: ಗುಲಾಂ ನಬಿ ಆಜಾದ್!

Feb 9, 2021

ನವದೆಹಲಿ(ಫೆ.09): ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್ ತಮ್ಮ ವಿದಾಯದ ವೇಳೆ ಮಾತನಾಡುತ್ತಾ, ನಾನು ಯಾವತ್ತೂ ಪಾಕಿಸ್ತಾನಕ್ಕೆ ಹೋಗಿಲ್ಲ, ಈ ವಿಚಾರದಲ್ಲಿ ನಾನು ಭಾಗ್ಯಶಾಲಿ. ನಾನೊಬ್ಬ ಭಾರತೀಯ ಮುಸಲ್ಮಾನ ಎನ್ನಲು ಹೆಮ್ಮೆಯಾಗುತ್ತೆ:.ತಾನು ಭಾರತದಲ್ಲಿದ್ದೇನೆ ಎಂದು ಪ್ರತಿಯೊಬ್ಬ ಮುಸಲ್ಮಾನನೂ ಹೆಮ್ಮೆ ಪಡಬೇಕೆಂಬುವುದು ನನ್ನ ಅನಿಸಿಕೆ ಎಂದಿದ್ದಾರೆ. ಇದೇ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನು ನೆನಪಿಸಿಕೊಂಡ ಆಜಾದ್‌ ಅತ್ಯಂತ ಸುಲಭದ ಕೆಲಸ ವಾಜಪೇಯಿ ಆಡಳಿತ ಅವಧಿಯಲ್ಲಿ ನಡೆದಿತ್ತು. ವೈಮನಸ್ಸು ಹೇಗೆ ದೂರ ಮಾಡುವುದು? ಸಂಸತ್ತನ್ನು ಹೇಗೆ ನಡೆಸುವುದು ಸೇರಿ ಅಟಲ್‌ಜೀಯಿಂದ ನಾನು ಅನೇಕ ವಿಚಾರಗಳನ್ನು ಕಲಿತಿದ್ದೇನೆ ಎಂದಿದ್ದಾರೆ.

ಮೋದಿ ಭಾವುಕರಾದ ಘಟನೆ ನೆನೆದು ಅತ್ತ ಗುಲಾಂ ನಬಿ ಆಜಾದ್

ತಮ್ಮ ವಿದಾಯ ಭಾಷಣದಲ್ಲಿ ಗುಲಾಂ ನಬಿ ಆಜಾದ್ ಕೂಡಾ ಮೋದಿ ಉಲ್ಲೇಖಿಸಿದ 2005 ರ ಘಟನೆಯನ್ನು ನೆನೆದು ಭಾವುಕರಾದರು. ಸಂಜಯ್ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಈ ಮೂವರು ಮೃತಪಟ್ಟಾಗ ನಾನು ನನ್ನ ಜೀವನದಲ್ಲಿ ಅತ್ತಿದ್ದೇನೆ. ಯಾಕೆಂದರೆ ಇದೆಲ್ಲವೂ ಅಚಾನಕ್ಕಾಗಿ ನಡೆದದ್ದು. ಇದಾದ ಬಳಿಕ ಒಡಿಶಾಗೆ ಚಂಡಮಾರುತ ದಾಳಿ ಇಟ್ಟಾಗ ಅತ್ತಿದ್ದೆ. ಅಂದು ನನಗೆ ಅಲ್ಲಿ ಹೋಗಲು ಆದೇಶಿಸಿದ್ದರು, ಆದರೆ ಇತ್ತ ನನ್ನ ತಂದೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಐದನೇ ಬಾರಿ ನಾನು 2005 ರಲ್ಲಿ ಡಜನ್‌ಗಟ್ಟಲೇ ಗುಜರಾತ್‌ನ ತೀರ್ಥಯಾತ್ರಿಗಳು ಉಗ್ರ ದಾಳಿಯಲ್ಲಿ ಮೃತಪಟ್ಟಾಗ ಅತ್ತಿದ್ದೆ ಎಂದಿದ್ದಾರೆ. ಇದೇ ವೇಳೆ ದೇಶದಿಂದ ಭಯೋತ್ದಾನೆ ಕೊನೆಯಾಗಲಿ ಎಂದೂ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಪಾಕಿಸ್ತಾನಕ್ಕೆ ಹೋಗದಿರುವ ನಾನು ಭಾಗ್ಯಶಾಲಿ

ಪಾಕಿಸ್ತಾನಕ್ಕೆ ಈವರೆಗೂ ಹೋಗದಿರುವ ಭಾಗ್ಯಶಾಲಿಗಳಲ್ಲಿ ನಾನೂ ಒಬ್ಬ. ಅಲ್ಲಿನ ಪರಿಸ್ಥಿತಿ ಬಗ್ಗೆ ಓದಿದಾಗೆಲ್ಲಾ ನಾನೊಬ್ಬ ಭಾರತೀಯ ಮುಸಲ್ಮಾನ ಎಂದು ಬಹಳ ಹೆಮ್ಮೆ ಪಡುತ್ತೇನೆ ಎಂದಿದ್ದಾರೆ.

Source:SuvarnaNews