ಕಾಲೇಜು ಕಲಿಕೆ ತ್ಯಜಿಸಿ ವಿಶ್ವದ ಗಮನ ಸೆಳೆದ ಖ್ಯಾತನಾಮರು ಯಾರ್ಯಾರು ಗೊತ್ತೇ? ಸ್ಫೂರ್ತಿ ಕತೆಯನ್ನು ನೀವೂ ತಿಳಿದುಕೊಳ್ಳಿ

Mar 15, 2021

ಬಡತನ, ನೋವುಗಳನ್ನು ದಾಟಿ ಬಂದು ಗೆದ್ದು ನಿಂತ ಹತ್ತು ಹಲವು ಮಂದಿ ನಮ್ಮಲ್ಲೇ ಇದ್ದಾರೆ. ಛಲವೊಂದಿದ್ದರೆ, ನಮಗೆ ಏನು ಮಾಡಬೇಕು ಎಂಬ ಗುರಿ ಖಚಿತವಾಗಿದ್ದು, ಆತ್ಮಸ್ಥೈರ್ಯದಿಂದ ಮುನ್ನುಗ್ಗಿದರೆ ಏನೂ ಮಾಡಬಹುದು ಎಂಬುದಕ್ಕೆ ಇಂಥಾ ಉದಾಹರಣೆಗಳೇ ಸಾಕ್ಷಿ!

ದಕ್ಷಿಣ ಕೊರಿಯಾದ ಇ-ಕಾಮರ್ಸ್ ಸಂಸ್ಥೆ ಕೌಪಾಂಗ್ ಇಂಕ್​ನ ಸ್ಥಾಪಕ, ಉದ್ಯಮಿ ಬೊಮ್ ಕಿಮ್ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿ ಸೇರಲಿದ್ದಾರೆ ಎಂದು ಬ್ಲೂಮ್​ಬರ್ಗ್ ಸುದ್ದಿಸಂಸ್ಥೆ ವರದಿ ಮಾಡಿದೆ. ಕೊರಿಯಾದ ಅಮೆಜಾನ್ ಎಂದು ಕರೆಸಿಕೊಂಡಿರುವ ಈ ಕಂಪೆನಿ, ನ್ಯೂಯಾರ್ಕ್​ನಲ್ಲೂ ವಹಿವಾಟು ಆರಂಭಿಸಿದೆ. ಕಂಪೆನಿಯು ಸದ್ಯ 84 ಬಿಲಿಯನ್ ಡಾಲರ್ ಬೆಲೆಬಾಳುತ್ತದೆ. ದಕ್ಷಿಣ ಕೊರಿಯಾದಲ್ಲಿ ಜನಿಸಿದ ಬೊಮ್ ಕಿಮ್ ತನ್ನ ಜೀವನದ ದಿನಗಳನ್ನು ಅಮೆರಿಕದಲ್ಲೂ ಕಳೆದರು. ಫೋರ್ಬ್ಸ್ ಮಾಹಿತಿ ಪ್ರಕಾರ, ಬೊಮ್ ಕಿಮ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದವರು. ಬಳಿಕ, ಹಾರ್ವರ್ಡ್ ಬ್ಯುಸಿನೆಸ್ ಕಾಲೇಜು ಸೇರಿದ ಬೊಮ್ ಕಿಮ್ ಆರು ತಿಂಗಳಲ್ಲೇ ಕಾಲೇಜು ಬಿಟ್ಟರು.

ಹಾರ್ವರ್ಡ್ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದು ಎಂಬ ಹೆಸರಿಗೆ ಪಾತ್ರವಾಗಿದೆ. ಹಲವು ಖ್ಯಾತನಾಮರು ಈ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳಾಗಿದ್ದಾರೆ. ಆದರೆ, ಅಚ್ಚರಿಯ ವಿಷಯವೆಂದರೆ ಹಾರ್ವರ್ಡ್​ನಿಂದ ಡ್ರಾಪ್​ಔಟ್ (ಅರ್ಧಕ್ಕೆ ಬಿಟ್ಟ) ಆದ ವಿದ್ಯಾರ್ಥಿಗಳು ಕೂಡ ವಿಶೇಷ ಸಾಧನೆಗಳನ್ನು ತೋರಿದ್ದಾರೆ. ಕೆಲವು ಹಾರ್ವರ್ಡ್ ಡ್ರಾಪ್​ಔಟ್ ವಿದ್ಯಾರ್ಥಿಗಳು ಮಾಡಿರುವ ಸಾಧನೆಯನ್ನು ನಾವು ನೆನೆಯಲೇಬೇಕು. ಸ್ಫೂರ್ತಿ ಪಡೆಯಲೇಬೇಕು.

ಅತ್ಯುನ್ನತ ಸಾಧನೆ ಮಾಡಿದ ಹಾರ್ವರ್ಡ್ ಯುನಿವರ್ಸಿಟಿ ಡ್ರಾಪ್​ಔಟ್ ವಿದ್ಯಾರ್ಥಿಗಳು ಯಾರ್ಯಾರು?

ಬಿಲ್ ಗೇಟ್ಸ್
ಮೈಕ್ರೋಸಾಫ್ಟ್ ಸಂಸ್ಥಾಪಕ, ಖ್ಯಾತ ಹಾಗೂ ಯಶಸ್ವಿ ಉದ್ಯಮಿ, ತಮ್ಮ 26ನೇ ವರ್ಷದಲ್ಲೇ ಮಿಲಿಯನೇರ್ ಆದ ಬಿಲ್ ಗೇಟ್ಸ್ ಹಾರ್ವರ್ಡ್ ಯುನಿವರ್ಸಿಟಿಯ ಡ್ರಾಪ್​ಔಟ್ ವಿದ್ಯಾರ್ಥಿ. ವಿಶ್ವದ ಅತಿ ಶ್ರೀಮಂತ ಎಂಬ ಪಟ್ಟಿ ಸೇರಿ ಹಲವು ವರ್ಷಗಳ ಕಾಲ ಮೊದಲ ಸ್ಥಾನದಲ್ಲಿ ಬಿಲ್ ಗೇಟ್ಸ್ ಇದ್ದರು. ಕಾಲೇಜಿನಲ್ಲಿ ನಾನಾಯ್ತು, ನನ್ನ ಕಲಿಕೆ ಆಯ್ತು ಎಂಬಂತಿದ್ದೆ. ನಾನು ಕಲಿಕೆಯ ವೇಳೆ ಸಮಾಜದ ಜೊತೆ ಇನ್ನಷ್ಟು ತೆರೆದುಕೊಳ್ಳಬೇಕಿತ್ತು ಎಂದು 2018ರಲ್ಲಿ ಹಾರ್ವರ್ಡ್ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಬಿಲ್ ಗೇಟ್ಸ್ ಹೇಳಿದ್ದರು.

ಮಾರ್ಕ್ ಝುಕರ್​ಬರ್ಗ್
ಮನಃಶಾಸ್ತ್ರ ಹಾಗೂ ಕಂಪ್ಯೂಟರ್ ಸೈನ್ಸ್ ವಿಷಯವನ್ನು 2002 ಮತ್ತು 2004ರ ಅವಧಿಯಲ್ಲಿ ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಕಲಿತವರು ಮಾರ್ಕ್ ಝಕರ್​ಬರ್ಗ್. ಇನ್ನೊಂದು ವಿಶೇಷ ಅಂದರೆ, ಮಾರ್ಕ್ ಝಕರ್​ಬರ್ಗ್ ತಮ್ಮ ಫೇಸ್​ಬುಕ್ ಯೋಜನೆಯನ್ನು ಹಾರ್ವರ್ಡ್ ಯುನಿವರ್ಸಿಟಿಯಲ್ಲೇ ಆರಂಭಿಸಿದ್ದರು. ಕಾಲೇಜು ಕಲಿಕೆಯ ವೇಳೆಯಲ್ಲೇ ‘TheFacebook’ ಲಾಂಚ್ ಮಾಡಿದ್ದ ಅವರು ಪ್ರಾಜೆಕ್ಟ್​ಗೆ ಗಮನ ಕೊಡುವ ದೃಷ್ಟಿಯಿಂದ ಕಾಲೇಜು ಕಲಿಕೆ ಅರ್ಧಕ್ಕೆ ಮೊಟಕುಗೊಳಿಸಿದರು. ಬಳಿಕ TheFacebook ಇಂದು ಕೋಟ್ಯಾಂತರ ಮಂದಿ ಬಳಕೆ ಮಾಡುವ Facebook ಎಂದಾಯ್ತು.

ಮ್ಯಾಟ್ ಡಾಮೊನ್
ಅಕಾಡೆಮಿ ಅವಾರ್ಡ್ ಪಡೆದ ಅಮೆರಿಕಾದ ಖ್ಯಾತ ನಟ ಮ್ಯಾಟ್ ಡಾಮೊನ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಮುಖ್ಯ ವಿಷಯವಾಗಿ ಆರಿಸಿ ಕಲಿಕೆಗೆ ಸೇರಿದ್ದರು. ಆದರೆ, ತಾವು ಡಿಗ್ರಿ ಪಡೆಯುವ ಕೇವಲ ಒಂದು ಸೆಮಿಸ್ಟರ್​ಗೆ ಮೊದಲು ಮ್ಯಾಟ್ ಡಾಮೊನ್ ಕಲಿಕೆಯಿಂದ ಹಿಂದೆ ಸರಿದರು. ಕಾಲೇಜು ಡ್ರಾಪ್​ಔಟ್ ಆದರು. ಮ್ಯಾಟ್ ಡಾಮೊನ್ ಕಾಲೇಜಿನಲ್ಲಿ ಇರಬೇಕಾದರೆ Good Will Hunting ಎಂಬ ಸಿನಿಮಾಗೆ ಚಿತ್ರಕಥೆ ಬರೆಯಲು ಕೆಲಸ ಮಾಡಿದ್ದರು. ಅದೇ ಕೆಲಸಕ್ಕೆ ಅವರಿಗೆ ನಂತರ ಆಸ್ಕರ್ ಪ್ರಶಸ್ತಿ ಕೂಡ ಲಭ್ಯವಾಗಿತ್ತು. ಈ ಬಗ್ಗೆ ಬ್ಯುಸಿನೆಸ್ ಇನ್​ಸೈಡರ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಡೇವಿಡ್ ಫೋಸ್ಟರ್ ವಾಲ್ಲೇಸ್
ಅಮೆರಿಕಾದ ಲೇಖಕ ಡೇವಿಡ್ ಫೋಸ್ಟರ್ ವಾಲ್ಲೇಸ್ ತಮ್ಮ Infinite Jest (1996) ಎಂಬ ಕಾದಂಬರಿಗೆ ಹೆಸರು ಪಡೆದವರು. ಆದರೆ, ಅವರೂ ಕೂಡ ಹಾರ್ವರ್ಡ್ ಡ್ರಾಪ್​ಔಟ್ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಡೇವಿಡ್ ಫೋಸ್ಟರ್ ವಾಲ್ಲೇಸ್ ತತ್ವಜ್ಞಾನ ವಿಷಯವನ್ನು ಕಲಿಯಲು ಹಾರ್ವರ್ಡ್ ವಿಶ್ವವಿದ್ಯಾಲಯ ಸೇರಿದ್ದರು. ಆದರೆ, ಅರ್ಧ ಸೆಮಿಸ್ಟರ್ ಬಳಿಕ ಅವರು ಕಾಲೇಜು ಕಲಿಕೆ ತ್ಯಜಿಸಿದರು.

ರಾಬರ್ಟ್ ಫ್ರಾಸ್ಟ್
ಕವಿ ರಾಬರ್ಟ್ ಫ್ರಾಸ್ಟ್ 1897 ರಿಂದ 1899ರ ವರೆಗೆ ಹಾರ್ವರ್ಡ್ ಯುನಿವರ್ಸಿಟಿ ವಿದ್ಯಾರ್ಥಿಯಾಗಿದ್ದರು. ಆದರೆ, ಅಲ್ಲಿ ಅವರು ಪದವಿ ಪಡೆಯಲಿಲ್ಲ. ತಮ್ಮ ಇಚ್ಛೆಯಂತೆಯೇ ವಿಶ್ವವಿದ್ಯಾಲಯ ಕಲಿಕೆ ತ್ಯಜಿಸಿದರು. ಹಾರ್ವರ್ಡ್ ವಿಶ್ವವಿದ್ಯಾಲಯ ಅತ್ಯುತ್ತಮ ಶಿಕ್ಷಣ ನೀಡಿದೆ. ಆದರೆ, ಅದು ನನ್ನನ್ನು ವಿದ್ಯಾರ್ಥಿಯಾಗಿಸಲಿಲ್ಲ ಎಂದು ರಾಬರ್ಟ್ ಫ್ರಾಸ್ಟ್ ಮುಂದೊಮ್ಮೆ ಹೇಳಿದ್ದರು.

ಜೇಮ್ಸ್ ಪಾರ್ಕ್
ಫಿಟ್​ಬಿಟ್ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (CEO) ಆಗಿರುವ ಜೇಮ್ಸ್ ಪಾರ್ಕ್, ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈಯನ್ಸ್ ವಿದ್ಯಾರ್ಥಿಯಾಗಿ ಕಲಿಯಲು ತೊಡಗಿದ್ದರು. ಆದರೆ, ಮೊದಲ ಅವಧಿಯಲ್ಲೇ ಅವರು ಕಾಲೇಜು ತ್ಯಜಿಸಿದರು. ಕಾಲೇಜು ಬಿಟ್ಟ ಬಳಿಕ, 2007ರಲ್ಲಿ ಎರಿಕ್ ಫ್ರಿಡ್​ಮನ್ ಜತೆ ಸೇರಿಕೊಂಡು ಫಿಟ್​ಬಿಟ್ ಎಂಬ ಎಲೆಕ್ಟ್ರಾನಿಕ್ ಮತ್ತು ಫಿಟ್​ನೆಸ್ ಕಂಪೆನಿ ಆರಂಭಿಸಿದರು.

ಹಾರ್ವರ್ಡ್ ಡ್ರಾಪ್​ಔಟ್ ವಿದ್ಯಾರ್ಥಿಗಳು ಇವಿಷ್ಟು ಮಂದಿ ಮಾತ್ರ ಎಂದಲ್ಲ. ಇನ್ನೂ ಹಲವಾರು ಜನರು ಹಾರ್ವರ್ಡ್ ತ್ಯಜಸಿದ ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳಾಗಿದ್ದಿರಬಹುದು. ಹಾರ್ವರ್ಡ್ ಮಾತ್ರವೇ ಏಕೆ? ನಮ್ಮಲ್ಲೇ ಬಡತನ, ನೋವುಗಳನ್ನು ದಾಟಿ ಬಂದು ಗೆದ್ದು ನಿಂತ ಹತ್ತು ಹಲವು ಮಂದಿ ಇದ್ದಾರೆ. ಶಾಲೆ-ಕಾಲೇಜು ಬಿಟ್ಟರೆ ಉದ್ಧಾರ ಆಗುತ್ತೇವೆ ಎಂದು ಇದರ ಅರ್ಥವಲ್ಲ. ಬದಲಾಗಿ, ಛಲವೊಂದಿದ್ದರೆ, ನಮಗೆ ಏನು ಮಾಡಬೇಕು ಎಂಬ ಗುರಿ ಖಚಿತವಾಗಿದ್ದು, ಆತ್ಮಸ್ಥೈರ್ಯದಿಂದ ಮುನ್ನುಗ್ಗಿದರೆ ಏನೂ ಮಾಡಬಹುದು ಎಂಬುದಕ್ಕೆ ಇಂಥಾ ಉದಾಹರಣೆಗಳು ಸಾಕ್ಷಿ!

Source:TV9Kannada