ಹಂಸಲೇಖ 70ನೇ ಜನ್ಮದಿನ: ಸಂಗೀತ, ಸಾಹಿತ್ಯ, ಸಂಭಾಷಣೆ, ಚಿತ್ರಕಥೆಯಲ್ಲಿ ಗೆದ್ದ ನಾದಬ್ರಹ್ಮನ ಒಂದು ಯೋಜನೆ ಇನ್ನೂ ಕೈಗೂಡಿಲ್ಲ; ಏನದು?

Jun 23, 2021

Happy Birthday Hamsalekha: ಸಂಗೀತ, ಸಾಹಿತ್ಯ ಮಾತ್ರವಲ್ಲದೆ ಚಿತ್ರರಂಗದ ಹಲವು ವಿಭಾಗಗಳಲ್ಲಿ ದುಡಿದವರು ಹಂಸಲೇಖ. ಆದರೂ ಅವರು ಅಂದುಕೊಂಡ ಆ ಒಂದು ಕೆಲಸ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಕನ್ನಡ ಚಿತ್ರರಂಗಕ್ಕೆ ‘ನಾದಬ್ರಹ್ಮ’ ಹಂಸಲೇಖ ನೀಡಿದ ಕೊಡುಗೆ ಅಪಾರ. ಇಂದು (ಜೂ.23) ಅವರು 70ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ಅನೇಕರು ಶುಭಾಶಯ ತಿಳಿಸುತ್ತಿದ್ದಾರೆ. ಕೋಟ್ಯಂತರ ಅಭಿಮಾನಿಗಳು, ಅಪಾರ ಸಂಖ್ಯೆಯ ಶಿಷ್ಯವರ್ಗ ಹಾಗೂ ಚಿತ್ರರಂಗದ ಸ್ನೇಹಿತರಿಂದ ಈ ದಿಗ್ಗಜನಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. 350ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಆದರೆ ಚಿತ್ರರಂಗದಲ್ಲಿ ಅವರು ಅಂದುಕೊಂಡ ಒಂದು ಯೋಜನೆ ಮಾತ್ರ ಈವರೆಗೂ ಕೈಗೂಡಿಲ್ಲ.

ಸಂಗೀತ ನಿರ್ದೇಶಕನಾಗಿ ಫೇಮಸ್​ ಆಗಿರುವ ಹಂಸಲೇಖ ನೀಡಿದ ಹಿಟ್ ಸಾಂಗ್​ಗಳಿಗೆ ಲೆಕ್ಕವಿಲ್ಲ. ಅವರ ಸಾಹಿತ್ಯವಂತೂ ಎವರ್​ಗ್ರೀನ್​. ಪ್ರೀತಿ-ಪ್ರೇಮ, ತುಂಟತನ, ರೊಮ್ಯಾನ್ಸ್​ನಿಂದ ಹಿಡಿದು ಅಧ್ಯಾತ್ಮದವರೆಗೆ ಎಲ್ಲ ಬಗೆಯ ಹಾಡುಗಳನ್ನೂ ಅವರು ಬರೆದು ಸೈ ಎನಿಸಿಕೊಂಡಿದ್ದಾರೆ. ಪ್ರೇಮಲೋಕ, ರಣಧೀರ, ಯುಗಪುರುಷ, ಹಳ್ಳಿಮೇಷ್ಟ್ರು ಮುಂತಾದ ಚಿತ್ರಗಳಿಗೆ ಸಂಭಾಷಣೆಯನ್ನೂ ಬರೆದರು. ಕೆಲವು ಸಿನಿಮಾಗಳಿಗೆ ಕಥೆ ಮತ್ತು ಚಿತ್ರಕಥೆಯನ್ನೂ ಬರೆದರು. ಆದರೆ ಹಂಸಲೇಖ ಅವರು ಕೈಹಾಕಿದ ಒಂದು ಕೆಲಸ ಮಾತ್ರ ಇನ್ನೂ ಈಡೇರಲಿಲ್ಲ. ಅದು ನಿರ್ದೇಶನ!

ಹೌದು, ಹಲವು ವರ್ಷಗಳ ಹಿಂದೆಯೇ ಸಿನಿಮಾ ನಿರ್ದೇಶನ ಮಾಡಲು ಹಂಸಲೇಖ ಪ್ಲ್ಯಾನ್​ ಮಾಡಿಕೊಂಡಿದ್ದರು. ನಾಲ್ಕೂವರೆ ದಶಕಗಳಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಹಂಸಲೇಖ ಅವರ ಅನುಭವ ಅಪಾರವಾದದ್ದು. ನೂರಾರು ನಟ-ನಟಿಯರ ಜೊತೆ, ನಿರ್ದೇಶಕ-ನಿರ್ಮಾಪಕರ ಜೊತೆ ಅವರು ಕೆಲಸ ಮಾಡಿದ್ದಾರೆ. ಈ ಎಲ್ಲ ಅನುಭವದ ಆಧಾರದ ಮೇಲೆ ದಶಕದ ಹಿಂದೆಯೇ ಅವರು ಒಂದು ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಅದು ಕಾರಣಾಂತರಗಳಿಂದ ಕೈಗೂಡಲಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಅವರು ಮತ್ತೆ ನಿರ್ದೇಶನದ ಬಗ್ಗೆ ಆಸಕ್ತಿ ತೋರಿಸಿದ್ದರು. ‘ಶಾಕುಂತ್ಲೆ’ ಎಂಬ ಸಿನಿಮಾವನ್ನು ನಿರ್ದೇಶಿಸುವ ಕುರಿತು ಪ್ರಸ್ತಾಪ ಮಾಡಿದ್ದರು. ಅದಕ್ಕಾಗಿ ಪೂರ್ವ ತಯಾರಿಯನ್ನೂ ಅವರು ಮಾಡಿಕೊಂಡಿದ್ದರು. ಅದಾಗಿ ಎರಡು-ಮೂರು ವರ್ಷಗಳು ಕಳೆದರೂ ಆ ಚಿತ್ರ ಯಾವ ಹಂತದಲ್ಲಿದೆ ಎಂಬ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಅವರ ನಿರ್ದೇಶನದಲ್ಲಿ ಮೂಡಿಬರುವ ಸಿನಿಮಾವನ್ನು ಕಣ್ತುಂಬಿಕೊಳ್ಳಬೇಕು ಎಂದು ಅಭಿಮಾನಿಗಳು ಕಾದಿದ್ದಾರೆ. ಆದಷ್ಟು ಬೇಗ ಅವರು ತಮ್ಮ ನಿರ್ದೇಶನದ ಯೋಜನೆಯನ್ನು ಪೂರ್ಣಗೊಳಿಸುವಂತಾಗಲಿ ಎಂಬುದು ಸಿನಿಪ್ರಿಯರ ಆಶಯ.

Source: Tv9Kannada